ಜನರ ಹಿತ ಪಾಲಿಸುವ ತತ್ವಸಿದ್ಧಾಂತಗಳಿರುವ ಪಕ್ಷ ಕಾಂಗ್ರೆಸ್‌

| Published : Dec 30 2023, 01:15 AM IST

ಸಾರಾಂಶ

ಕೇವಲ ಆಡಳಿತ, ಅಧಿಕಾರವಲ್ಲದೇ ಜನರ ಹಿತಾಸಕ್ತಿ ಕಾಯುವ ತತ್ವ ಸಿದ್ಧಾಂತವಿರುವ ಪಕ್ಷ ಕಾಂಗ್ರೆಸ್‌ ಆಗಿದೆ.

ಕಡೂರು: ಕಾಂಗ್ರೆಸ್ ಕೇವಲ ಆಡಳಿತ ಅಥವಾ ಅಧಿಕಾರಕ್ಕಾಗಿ ಹುಟ್ಟದೆ, ಜನರ ಹಿತಕ್ಕಾಗಿ ತನ್ನದೇ ಆದ ತತ್ವ, ಸಿದ್ಧಾಂತಗಳನ್ನು ಇಟ್ಟುಕೊಂಡು ಹುಟ್ಟಿದ ಎಕೈಕ ಪಕ್ಷ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ನಂದಿ ಕ್ರೀಡಾ ಭವನದ ಆವರಣದಲ್ಲಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್‌ವತಿಯಿಂದ ನಡೆದ ಕಾಂಗ್ರೆಸ್ 139ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಬೆರಳಣಿಕೆಯಷ್ಟು ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಡ್ಯಾಂಗಳಿದ್ದವು. ಇಂದು ಅವುಗಳ ಸಂಖ್ಯೆ ನೂರಾರಾಗಿದೆ ಎಂದರೆ ಅದಕ್ಕೆ ಕಾರಣ ಅನೇಕ ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಕೇವಲ ಆಡಳಿತ ಅಥವಾ ಅಧಿಕಾರಕ್ಕಾಗಿ ಹುಟ್ಟಿಕೊಳ್ಳಲಿಲ್ಲ. ಜನರ ಹಿತಕ್ಕಾಗಿ ತನ್ನದೇ ಆದ ತತ್ವ ಚಿಂತನೆಗಳನ್ನು ಇಟ್ಟುಕೊಂಡು ಹುಟ್ಟಿದ ಪಕ್ಷ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಳೆದ 28 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ನಾನು ಕೂಡ ಒಂದೇ ಪಕ್ಷದಲ್ಲಿದ್ದೆ. ಆದರೆ ಸಣ್ಣ ಪುಟ್ಟ ಜಾತಿಗಳು ಹಾಗೂ ಅಲ್ಪ ಸಂಖ್ಯಾತ ಸಮಾಜಗಳಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯಂತಹ ಹಿಂದುಳಿದ ವರ್ಗಗಳ ನಾಯಕರಿಗೆ ಅಧಿಕಾರ ನೀಡಿ ಸಾಮಾಜಿಕ ನ್ಯಾಯ ನೀಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ನಾನು ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದು, ಲೋಕಸಭಾ ಚುನಾವಣೆ ಸಮೀಪ ಇರು‍ವ ಕಾರಣ ಕಾಂಗ್ರೆಸ್ ಪಕ್ಷವು ಮತ್ತಷ್ಟು ಸಂಘಟನೆ ಆಗಬೇಕಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, 139 ವರ್ಷಗಳ ನಂತರವೂ ಕಾಂಗ್ರೆಸ್ ಉಳಿಯಲು ಪಕ್ಷದ ತತ್ವ ಮತ್ತು ಸಿದ್ಧಾಂತ ಕಾರಣ. ಇಷ್ಟು ದೊಡ್ಡ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ನಾವೆಲ್ಲ ಇದ್ದೇವೆ ಅನ್ನುವುದೇ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ, 1885ರಲ್ಲಿ ಪ್ರಾರಂಭವಾದ ಕಾಂಗ್ರೆಸ್ ಪಕ್ಷ ಹಂತ ಹಂತವಾಗಿ ಮೇಲೆ ಬಂದು ಸಾವಿರಾರು ಉತ್ತಮ ರಾಜಕೀಯ ವ್ಯಕ್ತಿಗಳನ್ನು ಪಕ್ಷವು ಬೆಳೆಸಿದೆ ಎಂದರು. ಕಡೂರು ಘಟಕದ ಅಧ್ಯಕ್ಷ ಬಾಸೂರು ಚಂದ್ರಮೌಳಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಕೋಟ್ಯಾನು ಕೋಟಿ ಜನ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಶಕ್ತಿ ನೀಡಿದ್ದಾರೆ ಜೊತೆಗೆ ವ್ಯಕ್ತಿಗತವಾಗಿ ಅವರು ಸಹ ಬೆಳೆಯುತ್ತಿದ್ದಾರೆ ಎಂದರು.

ಕಡೂರು ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಯಾಸೀನ್ ಮುಖಂಡರಾದ ಕೆ.ಜಿ.ಶ್ರೀನಿವಾಸಮೂರ್ತಿ, ಪಂಂಚನಹಳ್ಳಿ ಪ್ರಸನ್ನ, ಎಂ.ಆರ್.ಟಿ.ಸುರೇಶ್, ಇಮ್ರಾನ್, ಗುಮ್ಮನಹಳ್ಳಿ ಅಶೋಕ್, ದಾಸನಗುತ್ತಿ ಚಂದ್ರಪ್ಪ, ರೇವತಿ ನಾಗರಾಜ್, ಉಮೇಶ್ ಕಾಂಗ್ರೆಸ್ ಪಕ್ಷ ಕುರಿತು ಮಾತನಾಡಿದರು.