ಕಾಂಗ್ರೆಸ್‌ಗೆ ಸೋಲಿನ ಭಯ ಕಾಡತೊಡಗಿದೆ: ಮಲ್ಕಾಪುರೆ

| Published : Mar 28 2024, 12:49 AM IST

ಸಾರಾಂಶ

ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡು ಶಸ್ತ್ರತ್ಯಾಗ ಮಾಡಿದೆ.

ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸೋಲಿನ ಭಯ ಕಾಡತೊಡಗಿದ್ದು, ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರನ್ನು ಅಖಾಡಕ್ಕೆ ಇಳಿಸುವ ಪ್ರಯತ್ನವೂ ಕೈಗೂಡದೆ ಇರುವುದರಿಂದ ಮಕ್ಕಳನ್ನು, ಸೊಸೆಯಂದಿರನ್ನು ಸೇರಿದಂತೆ ಕುಟುಂಬದವರನ್ನೇ ಅಖಾಡಕ್ಕೆ ಇಳಿಸುತ್ತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಘುನಾಥ ಮಲ್ಕಾಪುರೆ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡು ಶಸ್ತ್ರತ್ಯಾಗ ಮಾಡಿದೆ. ಹೀಗಾಗಿ, ಅಭ್ಯರ್ಥಿಗಳು ಸಿಗದೆ ಇರುವುದರಿಂದ ಸಚಿವರು ಸೇರಿದಂತೆ ಪಕ್ಷದ ನಾಯಕರ ಸಂಬಂಧಿಕರನ್ನ ಒತ್ತಾಯ ಮಾಡಿ ಸ್ಪರ್ಧೆಗೆ ಇಳಿಸಲಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.

ಕರಡಿ ಅವರು ಬಿಜೆಪಿಯಲ್ಲಿಯೇ ಇರುತ್ತಾರೆ ಮತ್ತು ಅವರ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಾರೆ. ಅವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎನ್ನುವುದು ಶುದ್ಧಸುಳ್ಳು. ಇದರಲ್ಲಿ ಹುರುಳಿಲ್ಲ. ಪಕ್ಷದ ಅಭ್ಯರ್ಥಿಯೊಂದಿಗೆ ಶೀಘ್ರದಲ್ಲಿಯೇ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಇದಕ್ಕೆ ಜೆಡಿಎಸ್ ಪಕ್ಷವೂ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪಕ್ಷದ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದರು.

ಶೀಘ್ರವೇ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಕೈಗೊಳ್ಳಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ, ಶಾಸಕ ನೇಮಿರಾಜ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಸಿ.ವಿ. ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮುಖಂಡರಾದ ವೀರೇಶ ಮಹಾಂತಯ್ಯನಮಠ ಇದ್ದರು.

ಹಿಟ್ನಾಳ ಕುಟುಂಬದ ಮೇಲೆ ತಂಗಡಗಿ ಸಿಟ್ಟು:

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳರನ್ನು ಸೋಲಿಸುವುದಕ್ಕಾಗಿಯೇ ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿಯ ಕುರಿತು ಗೌರವದಿಂದ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದಷ್ಟು ಬಿಜೆಪಿ ಅಧಿಕ ಮತಗಳು ಬರುತ್ತವೆ ಎನ್ನುವುದು ಗೊತ್ತಿದ್ದೇ ಟೀಕೆ ಮಾಡುತ್ತಾರೆ. ಈ ಮೂಲಕ ಹಿಟ್ನಾಳ ಕುಟುಂಬಕ್ಕೆ ಮತಗಳು ಬಾರದಂತೆ ಮಾಡುತ್ತಿದ್ದಾರೆ ಎಂದರು.