ಸಾರಾಂಶ
ರಾಜ್ಯ ಸರ್ಕಾರ 10 ತಿಂಗಳಿಂದ ಕುಂಟುತ್ತಾ ಸಾಗಿದೆ. ಎಸ್ಸಿ ಎಸ್ಟಿ ₹11 ಸಾವಿರ ಕೋಟಿ ಅನುದಾನವನ್ನು ಐದು ಗ್ಯಾರಂಟಿಗಳಿಗೆ ಬಳಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಜವಾದ ದಲಿತ ವಿರೋಧಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ಹೊಸಪೇಟೆ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟಿರುವ ಅನುದಾನವನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೊಸಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಇಲ್ಲಿನ ಪಟೇಲ್ ನಗರದ ಬಳಿ ಸಮಾವೇಶಗೊಂಡ ಕಾರ್ಯರ್ತರು ಹಾಗೂ ಮುಖಂಡರು, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ, ನಂತರ ತಹಸೀಲ್ದಾರ್ ಕಚೇರಿಗೆ ತಲುಪಿದರು. ಸಿಎಂ ಸಿದ್ದರಾಮಯ್ಯ, ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಸ್‍ಸಿ, ಎಸ್‍ಟಿ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ 10 ತಿಂಗಳಿಂದ ಕುಂಟುತ್ತಾ ಸಾಗಿದೆ. ಎಸ್ಸಿ ಎಸ್ಟಿ ₹11 ಸಾವಿರ ಕೋಟಿ ಅನುದಾನವನ್ನು ಐದು ಗ್ಯಾರಂಟಿಗಳಿಗೆ ಬಳಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಜವಾದ ದಲಿತ ವಿರೋಧಿಯಾಗಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದ ನಿಜವಾದ ದಲಿತ ಹಾಗೂ ಅಂಬೇಡ್ಕರ್ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ 60 ವರ್ಷಗಳಿಂದಲೂ ದಲಿತರ ಮತಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರ ಬಂದು ಆ ಸಮುದಾಯಗಳನ್ನು ತುಳಿಯುತ್ತಲೇ ಬಂದಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ಬಿಜೆಪಿ ಅವಧಿಯಲ್ಲಿಯೇ ಹೆಚ್ಚು ಅನುದಾನವನ್ನು ದಲಿತ ಸಮುದಾಯಗಳ ಅಭಿವೃದ್ಧಿಗೆ ನೀಡಿದೆ. ಎಸ್‍ಇಪಿ ಮತ್ತು ಟಿಎಸ್‍ಪಿ ಯೋಜನೆಯಲ್ಲಿ ಸಾವಿರಾರು ಕೋಟಿ ರು.ಗಳನ್ನು ನೀಡಿ, ದಲಿತ ವರ್ಗದವರು ವಾಸಿಸುವ ಬೀದಿಗಳಲ್ಲಿ ಸಿಮೆಂಟ್ ರಸ್ತೆ ಚರಂಡಿಯನ್ನು ನಿರ್ಮಾಣ ಮಾಡಿ, ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ. ಕಾಂಗ್ರೆಸ್ ಈ ಎಲ್ಲ ಅನುದಾನಗಳಿಗೆ ತಿಲಾಂಜಲಿ ನೀಡುತ್ತಿದೆ ಎಂದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ, ಮಂಡಲ ಅಧ್ಯಕ್ಷ ಶಂಕರ ಮೇಟಿ, ಪದಾಧಿಕಾರಿಗಳಾದ ರಾಘವೇಂದ್ರ, ರೇಣಸಿದ್ದಪ್ಪ, ಅನುರಾಧ, ಕಿರಣ್ ಶಂಕರಿ, ಶ್ರೀನಿವಾಸ್ ಇತರರಿದ್ದರು.