ಸಾರಾಂಶ
ಕಾರ್ಕಳ: ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಕಲಿ ಪರಶುರಾಮ ಪ್ರತಿಮೆ ವಿವಾದದಿಂದ ಕಾರ್ಕಳದಲ್ಲಿ ವರ್ಚಸ್ಸು ಕಳೆದುಕೊಂಡಿರುವವರು ವಿನಾಕಾರಣ ಕಾಂಗ್ರೆಸ್ ನಾಯಕರ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್ ಹೇಳಿದ್ದಾರೆ.
ಒಂದು ಕಡೆ ಆರೋಪಗಳಿಂದ ಮುಖ ತೋರಿಸಲಾಗದ ಪರಿಸ್ಥಿತಿ, ಮತ್ತೊಂದೆಡೆ ಹೆಚ್ಚುತ್ತಿರುವ ಕಾಂಗ್ರೆಸ್ ಸರ್ಕಾದ ಜನಪ್ರೀಯತೆಯಿಂದ ಕಂಗಾಲಾಗಿರುವ ಕಾರ್ಕಳ ಬಿಜೆಪಿ ನಾಯಕರು ದಿನಕ್ಕೊಂದು ಸುಳ್ಳುಗಳೊಂದಿಗೆ ಕಾಂಗ್ರೆಸ್ ನಾಯಕರ ವಿರುದ್ದ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದರು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಅಭಿವೃದ್ಧಿಗೆ ಯಥೇಚ್ಛವಾಗಿ ಅನುದಾನ ನೀಡುತ್ತಿದ್ದು ಅದರಂತೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೂ ಅನುದಾನವು ಮಂಜೂರಾಗಿದೆ. ರಾಜ್ಯ ಸರ್ಕಾರದ ಅನುದಾನವನ್ನು ನನ್ನದೇ ಸಾಧನೆ ಎಂದು ಬಿಂಬಿಸಿಕೊಳ್ಳಲು ತಿಣುಕಾಡುತ್ತಿರುವ ಶಾಸಕ ಸುನೀಲ್ ಕುಮಾರ್ ತನ್ನ ಹಿಂಬಾಲಕರ ಮೂಲಕ ಕಾಂಗ್ರೆಸ್ ನಾಯಕರ ವಿರುದ್ದ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಮುನಿಯಾಲು ಪಡುಕುಡೂರು ರಸ್ತೆಯಾಗಲಿ ಅಥವಾ ಕಾರ್ಕಳದ ಯಾವುದೇ ರಸ್ತೆಯಾಗಲಿ ಗುತ್ತಿಗೆ ಪಡೆದುಕೊಂಡವರಿಗೆ ಮಾತ್ರ ಕಾಮಗಾರಿ ನಡೆಸಲು ಸಾಧ್ಯ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸದ ಬಿಜೆಪಿ ನಾಯಕರು ಕಾಮಗಾರಿಗೆ ಅಡ್ಡಿಪಡಿಸುವ, ಗುತ್ತಿಗೆದಾರರನ್ನು ಬೆದರಿಸುವ ಕೃತ್ಯಕ್ಕೆ ಇಳಿದಿರುವುದು ಸರಿಯಲ್ಲ. ಕಾರ್ಕಳದಲ್ಲಿ ಎಲ್ಲವೂ ನಾನು ಹೇಳಿದಂತೆ ನಡೆಯಬೇಕು ಎನ್ನುವ ಸರ್ವಾಧಿಕಾರಿ ಧೋರಣೆಯನ್ನು ಶಾಸಕರು ಬಿಟ್ಟು ಪ್ರಜಾಪ್ರಭುತ್ವಕ್ಕೆ ಗೌರವ ನೀಡಬೇಕು ಎಂದು ಅಭಿಪ್ರಾಯಪಟ್ಟರು. ವಿನಾಕಾರಣ ಪದೇ ಪದೇ ನಮ್ಮ ನಾಯಕರ ವಿರುದ್ದ ಅಪಪ್ರಚಾರಗಳನ್ನು ನಡೆಸುತ್ತಿರುವ ವಿಘ್ನ ಸಂತೋಷಿಗಳಿಗೆ ಪಡುಕುಡೂರಿನ ತಾಯಿ ಭದ್ರಕಾಳಿ ಸದ್ಬುದ್ದಿ ನೀಡಲಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))