ಸಾರಾಂಶ
ನಿಮ್ಮ ಜಿಲ್ಲೆಯಲ್ಲಿಯೇ ಜನ ನಿಮ್ಮನ್ನು ಗೆಲ್ಲಿಸಲ್ಲಿಲ್ಲ, ಮತ್ಯಾಕೆ ಕಣಕ್ಕಿಳಿದಿದ್ದೀರಿ. ನೀವು ಜನರಿಂದ ತಿರಸ್ಕೃತವಾದವರು
ಗದಗ: ರಾಜ್ಯದಲ್ಲಿ 20 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಬರೆದಿಟ್ಟುಕೊಳ್ಳಿ, ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ 130 ಸ್ಥಾನ ಬರುತ್ತದೆ ಎಂದು ಹೇಳಿದ್ದು, ಅದು ಖಚಿತವಾಗಿದೆ, ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಭಾರೀ ಜನಬೆಂಬಲ ಪಡೆಯಲಿದೆ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಗದಗ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನೆ ಕೇಳಿದ ಡಿ.ಕೆ.ಶಿವಕುಮಾರ, ನಿಮ್ಮ ನಾಯಕತ್ವದಲ್ಲಿಯೇ ಕಳೆದ ಚುನಾವಣೆ ನಡೆಯಿತು. ನಿಮ್ಮ ಜಿಲ್ಲೆಯಲ್ಲಿಯೇ ಜನ ನಿಮ್ಮನ್ನು ಗೆಲ್ಲಿಸಲ್ಲಿಲ್ಲ, ಮತ್ಯಾಕೆ ಕಣಕ್ಕಿಳಿದಿದ್ದೀರಿ. ನೀವು ಜನರಿಂದ ತಿರಸ್ಕೃತವಾದವರು. ಹಾಲಿ ಸಂಸದ ಶಿವಕುಮಾರ ಉದಾಸಿ ಯಾಕೆ ಟಿಕೆಟ್ ಬ್ಯಾಡಾ ಅಂದ್ರು, ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲ ಹೀಗಾಗಿ ಟಿಕೆಟ್ ಬೇಡ ಅಂದಿದ್ದಾರೆ. ಬೊಮ್ಮಾಯಿ ನೀವು ಗೆಲ್ಲುವ ಅಭ್ಯರ್ಥಿಯೇ ಅಲ್ಲ ಎಂದರು.
ಜನರು ನಮಗೆ 136 ಸೀಟು ಕೊಟ್ಟ ತಕ್ಷಣವೇ ನಾವು ಮೊದಲ ಕ್ಯಾಬಿನೆಟ್ ನಲ್ಲಿಯೇ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ, ಬಸವಣ್ಣನನ್ನು ಸಾಂಸ್ಕೃತಿಕ ನಾಯಕರನ್ನಾಗಿ ಮಾಡಿದ್ದೇವೆ. ಹೆಣ್ಣು ಕುಟುಂಬ ಕಣ್ಣು ಎಂದು ಅವರ ಖಾತೆಗೆ ಗೃಹಲಕ್ಷ್ಮಿ ಹಣ ಹಾಕಿದ್ದೇವೆ, ಗಂಡು ಮಕ್ಕಳಿಗೆ ಹಾಕಿದರೆ ಎಣ್ಣೆ ಅಂಗಡಿಗೆ ಹೋಗುತ್ತೀರಿ ಎಂದು ಕೊಡಲಿಲ್ಲ ಎಂದು ಲೇವಡಿ ಮಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರೂ ಅಧಿಕಾರಕ್ಕೆ ಬಂದಂತೆ, ಮಹದಾಯಿ ಹೋರಾಟಗಾರಿಗೆ ಮೊದಲ ಬಾರಿಗೆ ಟಿಕೆಟ್ ಕೊಟ್ಟ ಕೆ.ಎಚ್. ಪಾಟೀಲರು ಸೇರಿದಂತೆ ತಮ್ಮ ರಾಜಕೀಯ ಬದುಕು, ಗದಗ ಜಿಲ್ಲೆಯ ನಂಟಿನ ಬಗ್ಗೆ ಮಾತನಾಡಿ ಪ್ರತಿ ಕುಟುಂಬಕ್ಕೆ ₹1 ಲಕ್ಷ, 25 ಲಕ್ಷ ಫ್ರೀ ಇನ್ಸುರೇಶನ್ ಸೇರಿದಂತೆ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿದರು.