ಸಾರಾಂಶ
ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಹಾಗೂ ದೇಶಕ್ಕೆ ಅನೇಕ ಮಹಾನ್ ನಾಯಕರನ್ನು ಕೊಟ್ಟ ಶ್ರೇಯಸ್ಸು ಪಕ್ಷಕ್ಕೆ ಸಲ್ಲಬೇಕಿದೆ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಹಾಗೂ ದೇಶಕ್ಕೆ ಅನೇಕ ಮಹಾನ್ ನಾಯಕರನ್ನು ಕೊಟ್ಟ ಶ್ರೇಯಸ್ಸು ಪಕ್ಷಕ್ಕೆ ಸಲ್ಲಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಗುರುವಾರ ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಹಾನಗಲ್ ಮತ್ತು ಅಕ್ಕಿಆಲೂರು ಬ್ಲಾಕ್ ಹಾಗೂ ಹಾನಗಲ್ ನಗರ ಕಾಂಗ್ರೆಸ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೧೩೮ ವರ್ಷಗಳಿಂದಲೂ ಕಾಂಗ್ರೆಸ್ ದೇಶ ಹಾಗೂ ಜನರ ಹಿತಕ್ಕಾಗಿ ತನ್ನ ಕಾರ್ಯಗಳನ್ನು ತಪಸ್ಸಿನಂತೆ ಮುಂದುವರೆಸಿಕೊಂಡು ಬಂದಿದೆ. ಆಧುನಿಕ ಭಾರತದ ಇತಿಹಾಸವೆಂದರೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇತಿಹಾಸವೇ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಉಳಿಸಿದ ಹೋರಾಟ ಮತ್ತು ಸ್ವಾತಂತ್ರ್ಯಾ ನಂತರ ದೇಶ ಕಟ್ಟಿದ ಇತಿಹಾಸವೂ ಕಾಂಗ್ರೆಸ್ ಪಕ್ಷಕ್ಕಿದೆ ಎಂದರು.ದೇಶ ಒಡೆಯುವರು, ಮನುಷ್ಯ, ಮನುಷ್ಯನ ಮಧ್ಯೆ ದ್ವೇಷ ಬಿತ್ತುವರು ಇಂದಿನಂತೆ ಅಂದೂ ಕೂಡಾ ಇದ್ದರು. ಕಾಂಗ್ರೆಸ್ ಮನುಷ್ಯನ ಎದೆಯಲ್ಲಿ ಪ್ರೀತಿ, ಶಾಂತಿ, ಸೌಹಾರ್ದತೆ ಬಿತ್ತಿದ ಪಕ್ಷ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಇದು ಇವತ್ತಿನ ಮಳೆಗೆ ಹುಟ್ಟಿ, ನಾಳಿನ ಬಿಸಿಲಿಗೆ ಒಣಗಿ ಹೋಗುವ ಪಕ್ಷವಲ್ಲ. ಹತ್ತು, ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿರುವ ಕಾಂಗ್ರೆಸ್‌ನ ಬೇರುಗಳು ದೇಶದಲ್ಲಿ ಇಂದಿಗೂ ಸಹ ಭದ್ರವಾಗಿ ಬೇರೂರಿವೆ ಎಂದರು.
ಹಾನಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಭದ್ರಾವತಿ, ಶಿವು ತಳವಾರ, ಪುರಸಭೆ ಸದಸ್ಯರಾದ ಮಮತಾ ಆರೆಗೊಪ್ಪ, ವೀಣಾ ಗುಡಿ, ಶಂಶಿಯಾ ಬಾಳೂರ, ಮುಖಂಡರಾದ ಮಹದೇವಪ್ಪ ಬಾಗಸರ, ಗೀತಾ ಪೂಜಾರ, ಅನಿತಾ ಶಿವೂರ, ರಾಜೇಶ ಚವ್ಹಾಣ, ಬಸವರಾಜ ವಾಲಿಕಾರ, ಗುರುರಾಜ ನಿಂಗೋಜಿ, ಬಸವರಾಜ ಡುಮ್ಮನವರ, ಫಯಾಜ್ ಲೋಹಾರ, ರಾಜೂ ಬೇಂದ್ರೆ, ವಿನಯ ಬಂಕನಾಳ, ಪ್ರಸಾದಗೌಡ, ಪರಶುರಾಮ್ ತಳವಾರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.