ಅಂಬೇಡ್ಕರ್‌ಗೆ ಕಾಂಗ್ರೆಸ್‌ ಅನ್ಯಾಯ-ಡಾ. ಲಮಾಣಿ

| Published : Apr 15 2025, 12:50 AM IST

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಿಂದ ಅವರ ಕೊನೆಯ ದಿನಗಳವರೆಗೂ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆಯೇ ಹೊರತು ಅವರ ಪರವಾಗಿ ಯಾವತ್ತೂ ಇರಲಿಲ್ಲ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಮುಂಡರಗಿ: ಡಾ.ಬಿ.ಆರ್. ಅಂಬೇಡ್ಕರ ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದಿಂದ ಅವರ ಕೊನೆಯ ದಿನಗಳವರೆಗೂ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆಯೇ ಹೊರತು ಅವರ ಪರವಾಗಿ ಯಾವತ್ತೂ ಇರಲಿಲ್ಲ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಸೋಮವಾರ ಸಂಜೆ ಮುಂಡರಗಿ ಪಟ್ಟಣದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಮುಂಡರಗಿ ಮಂಡಲದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂವಿಧಾನ ಕರಡು ಸಮಿತಿ ಸಭೆಯನ್ನು ಕರೆದಾಗಲೂ ಸಹ ಅಂಬೇಡ್ಕರ್ ಬರದಂತೆ ನೋಡಿಕೊಂಡು ಇದಕ್ಕೆ ಒಕ್ಕೂಟ ವ್ಯವಸ್ಥೆಯಿಂದ ಬರಬೇಕೆಂದು ಯೋಚಿಸಿ ಚುನಾವಣೆ ಮಾಡಿದಾಗ ಬಂಗಾಳ ರಾಜರೊಬ್ಬರು ಅಂಬೇಡ್ಕರ್ ಅವರನ್ನು ಗೆಲ್ಲಿಸಿಕಳಿಸುತ್ತಾರೆ. ಆದರೆ ಆ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ.

1951ರಲ್ಲಿ ಕಾಶ್ಮೀರದ ವಿಷಯ, ಹಿಂದೂಕೋಡ್ ಬಿಲ್ ವಿಷಯ ಬಂದಾಗಲೂ ಸಹ ಅಂಬೇಡ್ಕರ್ ಅವರ ಮಾತಿಗೆ ಗೌರವ ಸಿಗದ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಕ್ಕೆ ಯಾರೂ ವಿರೋಧಿಸಲಿಲ್ಲ. ನಂತರ 1952ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಅಂಬೇಡ್ಕರ್ ಅವರಿಗೆ ನೀಡುವ ಬದಲು ಅವರ ಶಿಷ್ಯನಿಗೆ ಟಿಕೇಟ್ ಕೊಟ್ಟಿದ್ದರು. ಆಗ ಅಂಬೇಡ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆ ಸಂದರ್ಭದಲ್ಲಿ ನೆಹರು ಅವರು 2 ಬಾರಿ ಅಂಬೇಡ್ಕರ್ ವಿರುದ್ದ ಪ್ರಚಾರ ಭಾಷಣ ಮಾಡಲು ಹೋಗಿ ಅವರನ್ನು ಸೋಲಿಸಿದ್ದರು. ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೆ 6 ಅಡಿ 3 ಅಡಿ ಜಾಗೆ ಕೊಡಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಪಕ್ಷದವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

ಈ ಸಂದರ್ಭದಲ್ಲಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ಕೊಟ್ರೇಶಪ್ಪ ಅಂಗಡಿ, ಶಿವನಗೌಡ ಗೌಡ್ರ, ಶ್ರೀನಿವಾಸ ಅಬ್ಬಿಗೇರಿ, ದೇವು ಹಡಪದ, ಶಂಕರ ಉಳ್ಳಾಗಡ್ಡಿ, ಯಲ್ಲಪ್ಪ ಗಣಾಚಾರಿ, ರಮೇಶ ಹುಳಕನ್ನವರ, ತಿಮ್ಮಪ್ಪ ದಂಡಿನ, ಮೈಲಾರಪ್ಪ ಕಲಕೇರಿ, ಬಸವರಾಜ ಚಿಗಣ್ಣವರ, ದೇವಪ್ಪ ಇಟಗಿ, ಮಲ್ಲಿಕಾರ್ಜುನ ಹಣಜಿ, ಮಹೇಶ ದೇಸಾಯಿ, ಪರಶುರಾಮ ಕರಡಿಕೊಳ್ಳ, ಸೋಮರೆಡ್ಡಿ ಮುದ್ದಾಬಳ್ಳಿ, ಅಶೋಕ ಚೂರಿ, ಜೋತಿ ಹಾನಗಲ್, ಪವಿತ್ರ ಕಲ್ಲುಕುಟುಗರ್, ಪುಷ್ಪಾ ಉಕ್ಕಲಿ, ವೀಣಾ ಬೂದಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.