ರಾಹುಲ್‌ ನೇತೃತ್ವದಲ್ಲಿ ನಶಿಸುತ್ತಿದೆ ಕಾಂಗ್ರೆಸ್‌ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

| N/A | Published : Feb 09 2025, 01:17 AM IST / Updated: Feb 09 2025, 12:46 PM IST

Prahlad Joshi
ರಾಹುಲ್‌ ನೇತೃತ್ವದಲ್ಲಿ ನಶಿಸುತ್ತಿದೆ ಕಾಂಗ್ರೆಸ್‌ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲವಾದ ವಿರೋಧ ಪಕ್ಷವಿಬೇಕು. ಆದರೆ, ಪ್ರತಿಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳಲು ಆಗದ ಕಾಂಗ್ರೆಸ್‌ ತನ್ನ ದಯನೀಯ ಸ್ಥಿತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾರ್ಯವಾಗಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದಿಸಿರುವುದನ್ನು ನೋಡಿದರೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್‌ ನಶಿಸಿಹೋಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲವಾದ ವಿರೋಧ ಪಕ್ಷವಿಬೇಕು. ಆದರೆ, ಪ್ರತಿಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳಲು ಆಗದ ಕಾಂಗ್ರೆಸ್‌ ತನ್ನ ದಯನೀಯ ಸ್ಥಿತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಕಾಂಗ್ರೆಸ್‌ನ ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಅವರನ್ನೇ ಮುಗಿಸುವವರೊಂದಿಗೆ ಕೈಜೋಡಿಸುತ್ತಿದ್ದಾರೆ. ಮೊದಲು ತಮ್ಮನ್ನು ಮುಗಿಸುವವರ ವಿರುದ್ಧ ಹೋರಾಡುವುದನ್ನು ಕಲಿಯಬೇಕಿದೆ ಎಂದು ಸಲಹೆ ನೀಡಿದರು.

ಆಪ್‌ಗೆ ಕಪಾಳಮೋಕ್ಷ: ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಅಧಿಕಾರಕ್ಕೆ ಬಂದಿದ್ದ ಆಮ್‌ ಆದ್ಮಿ ಭ್ರಷ್ಟಾಚಾರವನ್ನೇ ಆಧಾರವನ್ನಾಗಿ ಮಾಡಿಕೊಂಡು ಮುಂದುವರಿದ ಪರಿಣಾಮ ದೆಹಲಿ ಮತದಾರರು ಆಪ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಕುಂಭಮೇಳದ ಕುರಿತು ಟೀಕೆ ಮಾಡಿದ್ದಕ್ಕಾಗಿಯೇ ಕಾಂಗ್ರೆಸ್ಸಿಗೆ ದೆಹಲಿ ಚುನಾವಣೆಯಲ್ಲಿ ಬಹುದೊಡ್ಡ ಪೆಟ್ಟು ಬಿದ್ದಿದೆ. ಮೆಕ್ಕಾ, ಮದೀನಾದಲ್ಲೂ ಕಾಲ್ತುಳಿತವಾಗಿ ಹಲವರು ಮೃತಪಡುತ್ತಾರೆ. ಹಾಗಂತ ಅಲ್ಲಿಗೆ ಹೋಗಬಾರದು ಎಂಬುದು ಸರಿಯೇ? ಅಲ್ಲಿಗೆ ಯಾಕೆ ಹೋಗುತ್ತೀರಿ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಬಹುದಿತ್ತು, ಯಾಕೆ ಪ್ರಶ್ನಿಸುತ್ತಿಲ್ಲ? ಎಂದರು.

ಪರಿಹಾರ ಕಂಡುಕೊಳ್ಳಿ :  ಮೈಕ್ರೋಫೈನಾನ್ಸ್ ಕಿರುಕುಳ ನಿಯಂತ್ರಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಸುಗ್ರೀವಾಜ್ಞೆ ಕುರಿತು ರಾಜ್ಯಪಾಲರ ಆಕ್ಷೇಪಕ್ಕೆ ಸರ್ಕಾರ ಸ್ಪಷ್ಟೀಕರಣ ನೀಡಲಿ. ಅದರಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಬೇಕು. ವಿರೋಧ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತಗೆದುಕೊಂಡು ರಾಜ್ಯಪಾಲರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.

ಹೀನ ಮನಸ್ಥಿತಿಗೆ ಕೈಗನ್ನಡಿ :  ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಜೋಶಿ, ಕೆಲವು ರಾಜ್ಯಗಳಲ್ಲಿ ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮತಯಂತ್ರಗಳು ಹ್ಯಾಕ್ ಆಗಿರಲಿಲ್ಲವೇ? ಬಿಜೆಪಿ ನಾಯಕರ ಮೇಲೆ ಕೋಪವಿದ್ದರೆ ಬಯ್ಯಲು ಪ್ರಜಾಪ್ರಭುತ್ವದಲ್ಲಿ ಮುಕ್ತ ಅವಕಾಶವಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಟೀಕಿಸುವುದು ಅವರ ಹೀನ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವ್ಯಂಗ್ಯವಾಡಿದರು.