ಕಾಂಗ್ರೆಸ್ ಸಮುದ್ರವಿದ್ದಂತೆ, ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ: ಡಾ. ಅಂಜಲಿ ನಿಂಬಾಳ್ಕರ್

| Published : Mar 29 2024, 12:48 AM IST

ಕಾಂಗ್ರೆಸ್ ಸಮುದ್ರವಿದ್ದಂತೆ, ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ: ಡಾ. ಅಂಜಲಿ ನಿಂಬಾಳ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದಲ್ಲಿ ಎಷ್ಟೇ ಗುಂಪು ಹಾಗೂ ವೈಮಸ್ಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿಯುತ್ತಿರೆಂಬ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ಮುಂಡಗೋಡ: ಚುನಾವಣೆಯೆಂಬ ಪರೀಕ್ಷೆ ಬಂದಿದೆ. ನಮ್ಮ ಎದುರಾಳಿ ಬಿಜೆಪಿ ಮನೆ ಬಿಟ್ಟು ನಮ್ಮನೆಗೆ ಬರಲು ಹೊರಟಿರುವವರಿಗೆ ಸ್ವಾಗತ ಮಾಡಬೇಕಿದೆ. ಕಾಂಗ್ರೆಸ್ ಎಂಬುದು ದೊಡ್ಡ ಸಮುದ್ರ. ನಮಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಯಾವ ವೇಳೆಯಲ್ಲಿ ಯಾವ ಆಪರೇಷನ್ ಮಾಡಬೇಕೆಂಬುದೂ ಗೊತ್ತಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ಗುರುವಾರ ಸಂಜೆ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಷ್ಟೇ ಗುಂಪು ಹಾಗೂ ವೈಮಸ್ಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿಯುತ್ತಿರೆಂಬ ವಿಶ್ವಾಸವಿದೆ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ್ ಮಾತನಾಡಿ, ಐದು ಗ್ಯಾರಂಟಿ ಕೊಟ್ಟು ರಾಜ್ಯದಲ್ಲಿ ೧.೧೭ ಕೋಟಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವ ಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ೨೪,೩೪೪ ಪಡಿತರ ಕಾರ್ಡ್‌ನಲ್ಲಿ ೧೯,೮೮೮ ಜನರಿಗೆ ಅನ್ನಭಾಗ್ಯ ಹಣ ಜಮೆಯಾಗಿದೆ. ಕನಿಷ್ಠ ಎರಡು ಸಾವಿರ ಕುಟುಂಬಕ್ಕೆ ಗೃಹಲಕ್ಷ್ಮೀ ಹಣ ಬರುತ್ತಿದೆ. ಪ್ರತಿ ಬೂತ್‌ನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿ, ಡಾ. ಅಂಜಲಿ ನಿಂಬಾಳ್ಕರ್ ಅವರಂಥ ಸರಳ ಸಜ್ಜನಿಕೆಯ ಮಹಿಳೆ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವುದು ಹಮ್ಮೆಯ ಸಂಗತಿ. ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡುತ್ತಾ ಮತ ಪಡೆಯಬೇಕಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ದುಡಿದು ಡಾ. ಅಂಜಲಿ ಅವರನ್ನು ಗೆಲ್ಲಿಸೋಣ ಎಂದರು.

ಹಿರಿಯ ಕಾಂಗ್ರೆಸ್ಸಿಗ ಎಚ್.ಎಂ. ನಾಯ್ಕ, ವಾದಿರಾಜ ರಾವ್ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ದೀಪಕ್ ದೊಡ್ಡೂರು, ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ, ಮರಿಯೋಜಿ ರಾವ್, ಗೋಪಾಲ ಪಾಟೀಲ, ಬಸವರಾಜ ನಡುವಿನಮನಿ ಮುಂತಾದವರಿದ್ದರು.ದೇವರ ದರ್ಶನ ಪಡೆದ ನಿಂಬಾಳ್ಕರ

ಸಭೆಗೆ ಆಗಮನಕ್ಕೂ ಪೂರ್ವ ಡಾ. ಅಂಜಲಿ ಅವರು ಮುಂಡಗೋಡ ಗ್ರಾಮದೇವಿ ಮಾರಿಕಾಂಬಾ ದೇವಸ್ಥಾನ, ರಜಾಕ್ ದರ್ಗಾ ಹಾಗೂ ಸಾಯಿ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.