ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣಪತ್ರ ಅಧಿಸೂಚನೆಯು ದೇಶದ ಭದ್ರತೆಗೆ ದೊಡ್ಡ ಅಡಚಣೆಯಾಗಲಿದೆ ಎಂದು ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪತ್ರಿಕಾಭವನದಲ್ಲಿ ಬಿಜೆಪಿ ಪ್ರಮುಖರು ಸುದ್ದಿಗೋಷ್ಠಿ ನಡೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಪಿಆರ್ ಸಿ ಅಧಿಸೂಚನೆಯು ಅತ್ಯಂತ ಅಪಾಯಕಾರಿಯಾಗಿದೆ. ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದಿಂದ ಅಕ್ರಮವಾಗಿ ವಲಸೆ ಬಂದಿರುವ ಸಾವಿರಾರು ಜನರಿಗೆ ಈ ಪ್ರಮಾಣಪತ್ರ ನೀಡುವುದರಿಂದ ಅವರಿಗೆ ಶಿಕ್ಷಣ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯ ಲಭ್ಯವಾಗುತ್ತವೆ. ಕೇಂದ್ರ ಸರ್ಕಾರ ಅಕ್ರಮ ವಲಸಿಗರನ್ನು ಹೊರಹಾಕಲು ಶ್ರಮಿಸುತ್ತಿದ್ದರೆ, ರಾಜ್ಯ ಸರ್ಕಾರ ಅವರನ್ನು ತನ್ನ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಯತ್ನಿಸುತ್ತಿದೆ. ಇದನ್ನು ತಡೆಯಲು ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ, ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಕಂದಾಯ ನಿರೀಕ್ಷಕರ ಮೂಲಕ ಇಂತಹ ಪ್ರಮಾಣಪತ್ರ ವಿತರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಮುಸ್ಲಿಂ ಮತದಾರರನ್ನು ಒಟ್ಟುಗೂಡಿಸಲು ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಸಂಚು ಇದಾಗಿದೆ. ಜನಸಂಖ್ಯೆ ಮಿತಿಮೀರಿ ಪರಿಸರದ ಮೇಲೆ ಆಗುವ ಹಾನಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಈ ದೇಶವಿರೋಧಿ ನಡೆಯ ವಿರುದ್ಧ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದರು.


ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಾಂಗ್ರೆಸ್ ಸರ್ಕಾರವು ಕೇವಲ ರಾಜಕೀಯ ಹೊಟ್ಟೆಕಿಚ್ಚಿನಿಂದ ತರಾತುರಿಯಲ್ಲಿ ಜಾತಿ ಜನಗಣತಿ ನಡೆಸಿ 600 ಕೋಟಿ ರುಪಾಯಿ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡಿದೆ. ಈ ಹಣವನ್ನು ವಿವಿಧ ಇಲಾಖೆಗಳಿಂದ ಪಡೆದು ಲೂಟಿ ಮಾಡಲಾಗಿದೆಯೇ ಎಂಬ ಸಂಶಯ ಕಾಡುತ್ತಿದೆ. ಆ ಜನಗಣತಿಯ ವರದಿ ಮತ್ತು ಲೆಕ್ಕಾಚಾರವನ್ನು ಸರ್ಕಾರ ತಕ್ಷಣ ಸಾರ್ವಜನಿಕರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಸುನೀಲ್ ಹೆಗಡೆ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ನಾಯ್ಕ, ಶಿವಾಜಿ ನರಸಾನಿ, ಮುಖಂಡರಾದ ಮನೋಜ್ ಭಟ್, ಸುಭಾಷ್ ಗುನಗಿ, ಈಶ್ವರ ನಾಯ್ಕ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು.

ಬಳಿಕ ಬಿಜೆಪಿ ಮುಖಂಡರು ಪಿಆರ್‌ಸಿ ವಿರೋಧಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು ಹಾಗೂ ಕೆಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿದರು.ಒಬಿಸಿ ವರ್ಗಗಳಿಗೆ ಸಿದ್ದರಾಮಯ್ಯ ದ್ರೋಹ: ಯಶಪಾಲ್ ಸುವರ್ಣ

ಹಿಂದುಳಿದ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಕಾಂತರಾಜ್ ವರದಿ ಸೇರಿದಂತೆ ವಿವಿಧ ವರದಿಗಳನ್ನು ಜಾರಿಗೆ ತರದೇ ಒಬಿಸಿ ವರ್ಗಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆರೋಪಿಸಿದರು. ಸಂಪುಟದಲ್ಲೂ ಸೂಕ್ತ ಸ್ಥಾನಮಾನ ನೀಡಿಲ್ಲ. ತಕ್ಷಣವೇ 204 ಹಿಂದುಳಿದ ಉಪಜಾತಿಗಳಿಗೆ ನ್ಯಾಯ ಒದಗಿಸದಿದ್ದರೆ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.