ಸಾರಾಂಶ
ಬೆಂಗಳೂರು : ಬೆಲೆ ಏರಿಕೆ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸಿದ ಮೊದಲ ಹಂತದ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಆತಂಕಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಎರಡನೇ ಹಂತದ ಜನಾಕ್ರೋಶ ಯಾತ್ರೆಯು ಬುಧವಾರದಿಂದ ಆರಂಭಗೊಳ್ಳಲಿದೆ ಎಂದೂ ಅವರು ತಿಳಿಸಿದರು. ಮೊದಲ ಹಂತದ ಜನಾಕ್ರೋಶ ಯಾತ್ರೆಯು ರಾಜ್ಯದ 9 ಜಿಲ್ಲೆಗಳಲ್ಲಿ ಹಾದು ಹೋಗಿದ್ದು, ಸುಮಾರು 1,115 ಕಿ.ಮೀ.ನಷ್ಟು ಪ್ರವಾಸ ಮಾಡಿದ್ದೇವೆ. ಈ ಯಾತ್ರೆಯಲ್ಲಿ ರಾಜ್ಯದ ಪಕ್ಷದ ಎಲ್ಲ ಮುಖಂಡರು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಯಾತ್ರೆಯನ್ನು 3.50 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಯಾತ್ರೆಯು ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಿದೆ. ನಮ್ಮ ಹೋರಾಟದ ಪರಿಣಾಮವಾಗಿ ಆಡಳಿತ ಪಕ್ಷದವರು ಗಾಬರಿಗೊಂಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದವರು ಸಹ ಏ.17ರಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದಾರೆ. ಇದೊಂದು ಕಪಟ ನಾಟಕ ಅಷ್ಟೇ. ರಾಜ್ಯದ ಮುಖ್ಯಮಂತ್ರಿಗಳಿಗೆ ಈಗ ಜ್ಞಾನೋದಯವಾಗುತ್ತಿದೆ. ಗ್ಯಾರಂಟಿಗಳ ಭ್ರಮೆಯಿಂದ ಹೊರಬರಬೇಕಾಗಿದೆ. ಗ್ಯಾರಂಟಿಯಿಂದ ಜನರು ರಾಜ್ಯದಲ್ಲಿ ಸಂತೋಷದಲ್ಲಿದ್ದಾರೆ ಎಂಬ ಭ್ರಮೆಯಲ್ಲಿದ್ದರು; ಅದು ಸತ್ಯವಲ್ಲ ಎಂಬುದು ನಮ್ಮ ಹೋರಾಟದ ಪರಿಣಾಮವಾಗಿ ಅವರಿಗೆ ಅರ್ಥ ಆಗುತ್ತಿದೆ ಎಂದು ಹೇಳಿದರು.