ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್ ಹೇಳಿದರು.ಗುರುವಾರ ಹಳೇಪೇಟೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವಲ್ಲಿ ಕಾಂಗ್ರೆಸ್ ಪಕ್ಷ ಶ್ರಮಿಸಿದೆ. ರಸ್ತೆ, ನೀರು, ಅಂಗನವಾಡಿ, ಶಾಲೆ ಹೀಗೆ ದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದು ಜನರ ಧ್ವನಿಯಾಗಿದೆ. ದೇಶದ ಶೇ.90 ರಷ್ಟು ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದೆ. ಎಲ್ಲಾ ಬೂತ್, ಗ್ರಾಪಂ ಮಟ್ಟದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಧ್ವಜ ಹಾರಿಸುವ ಮೂಲಕ ಕಾಂಗ್ರೆಸ್ ನ ಸಂಸ್ಥಾಪನಾ ದಿನವನ್ನು ಸಂಭ್ರಮಿಸಿದ್ದೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಈ.ಸಿ.ಜೋಯಿ ಮಾತನಾಡಿ, ದೇಶದಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಅತ್ಯುತ್ತಮ ನಾಯಕರು ಸೇರಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷ ಸದಾ ಜನಸಾಮಾನ್ಯರು, ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ಹಾಗೂ ಇತರೆ ರಾಜಕೀಯ ಪಕ್ಷಗಳು ಬ್ರಿಟಿಷ ರಂತೆ ಒಡೆದಾಳುವ ನೀತಿ ಅನುಸರಿಸುತ್ತಿವೆ. ಆದರೆ, ಕಾಂಗ್ರೆಸ್ ದೇಶದ ಎಲ್ಲಾ ಜನರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದೆ. ಯಾವುದೇ ಜಾತಿ, ಧರ್ಮದ ಬೇಧ ಭಾವವಿಲ್ಲದೆ ಎಲ್ಲಾ ಧರ್ಮೀಯರನ್ನೂ ಸರಿ ಸಮಾನವಾಗಿ ನಡೆಸಿಕೊಳ್ಳುತ್ತಿದೆ ಎಂದರು.ಕಾಂಗ್ರೆಸ್ ಮುಖಂಡ ಬಿ.ಎಸ್.ಸುಬ್ರಮಣ್ಯ ಮಾತನಾಡಿ, ದೇಶದಲ್ಲಿ ಜನರ ಸ್ವಾವಲಂಬಿ ಬದುಕಿಗಾಗಿ, ಜನರ ಆಶೋತ್ತರ ಈಡೇರಿಸಲು ನಮ್ಮ ಪಕ್ಷ ದುಡಿಯುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ನೀರೆರೆಯುವ ಕಾರ್ಯ ಮಾಡುತ್ತಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ತನ್ನದೇ ಆದ ಮಾರ್ಗ ಸೂಚಿ ಬಿಡುಗಡೆಗೊಳಿಸಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್ ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಸ್.ಡಿ.ರಾಜೇಂದ್ರ, ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಹೋಬಳಿ ಅಧ್ಯಕ್ಷ ಸಾಜು, ಪಕ್ಷದ ಮುಖಂಡರಾದ ಜುಬೇದಾ, ಈಚಿಕೆರೆ ಸುಂದರೇಶ್, ಭೀಮನರಿಪ್ರಶಾಂತ್, ಶ್ರೀಧರ, ಜೋಸ್, ಅನೀಫ್, ಮುತ್ತಿನಕೊಪ್ಪ ನಾಗರಾಜ್, ಎಚ್.ಎಂ.ಶಿವಣ್ಣ, ಮಾಳೂರು ದಿಣ್ಣೆರಮೇಶ್, ಹೊನಗಾರು ರಮೇಶ್,ಸುರಯ್ಯಭಾನು ಮತ್ತಿತರರು ಉಪಸ್ಥಿತರಿದ್ದರು.