ಅಂಬೇಡ್ಕರ್‌ರನ್ನು ಅವಮಾನಿಸಿದ ಏಕೈಕ ಪಕ್ಷ ಕಾಂಗ್ರೆಸ್‌

| Published : Dec 31 2024, 01:02 AM IST

ಸಾರಾಂಶ

ಸಂವಿಧಾನ ಸನ್ಮಾನ ಅಭಿಯಾನ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿದರು

ಕನ್ನಡಪ್ರಭವಾರ್ತೆ ಚಳ್ಳಕೆರೆ

ಭಾರತದ ಇತಿಹಾಸದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರನ್ನು ಅವಮಾನಿಸಿದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ಇಂದಿಗೂ ಸಹ ಕಾಂಗ್ರೆಸ್ ಪಕ್ಷದ ಅಗ್ರನಾಯಕರೂ ಸೇರಿದಂತೆ ಯಾರಿಗೂ ದಲಿತ ಸಮೂಹದ ಮೇಲೆ ಯಾವುದೇ ಗೌರವವಿಲ್ಲ. ಡಾ.ಅಂಬೇಡ್ಕರ್ ಅಷ್ಟೇಯಾಕೆ ಹಸಿರುಕ್ರಾಂತಿ ಹರಿಕಾರ ಬಾಬುಜಗಜೀವನರಾಮ್, ಹಿಂದುಳಿದ ವರ್ಗಗಳ ಅಗ್ರಗಣ್ಯನಾಯಕ ದೇವರಾಜ ಅರಸುರವರನ್ನು ಸಹ ಕಾಂಗ್ರೆಸ್ ಪಕ್ಷ ಅವಮಾನಿಸಿತ್ತು ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಸೋಮವಾರ ಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ವೇಧಿಕೆಯಡಿ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಅಭಿಯಾನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೇಶದ ಸ್ವಾತಂತ್ರ್ಯ ಇತಿಹಾಸವನ್ನು ಅವಲೋಕಿಸಿದಾಗ ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸಿಗೂ, ಇಂದಿನ ಕಾಂಗ್ರೆಸ್‌ಗೂ ಅಜಗಜಾಂತರ ವ್ಯತ್ಯಸವಿವೆ. ದೆಹಲಿಯಲ್ಲಿ ನಡೆದ ಲೋಕಸಭಾ ಚುನಾವಣೆ ಸೇರಿದಂತೆ ಒಟ್ಟು ಮೂರು ಚುನಾವಣೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರವರನ್ನು ಸ್ವಂತ ಪಕ್ಷದವರೇ ಸೋಲಿಸಿದ್ದರು.

ಅಂದಿನ ಪ್ರಧಾನಮಂತ್ರಿ ಜವಹರಲಾಲ್ ರಾಜಕೀಯ ಕುತಂತ್ರಕ್ಕೆ ಅಂಬೇಡ್ಕರ್ ಬಲಿಯಾಗಬೇಕಾಯಿತು. ಅಂಬೇಡ್ಕರ್ ದೆಹಲಿಯಲ್ಲಿ ಮೃತಪಟ್ಟಿದ್ದು ಬಾಡಿಗೆ ವಿಮಾನದಲ್ಲಿ ಅವರ ದೇಹವನ್ನು ಮಹರಾಷ್ಟ್ರಕ್ಕೆ ತರಲಾಯಿತು. ಪ್ರಧಾನಮಂತ್ರಿಯಾಗಿದ್ದ ನೆಹರೂ ಸಹ ನೆರವು ಒದಗಿಸಲಿಲ್ಲ. ಮಾಜಿ ಪ್ರಧಾನಮಂತ್ರಿಗಳಾದ ನೆಹರು, ಇಂದಿರಾಗಾಂಧಿ, ರಾಜೀವಗಾಂಧಿಯವರಿಗೆ ಸುಮಾರು 40 ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆದರೆ ಕಾಂಗ್ರೆಸ್ ಅಂದು ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಅಂಬೇಡ್ಕರ್‌ರವರನ್ನು ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ನಡೆಯ ಬಗ್ಗೆ ಪರಿಶಿಷ್ಟ ಜಾತಿ, ವರ್ಗದ ಸಮೂಹ ಚಿಂತನೆ ನಡೆಸಬೇಕು ಎಂದು ಹೇಳಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಲೋಕಸಭೆಯ ಕಾರ್ಯ ಕಲಾಪದಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ಸುದೀರ್ಘಕಾಲ ಕಾಂಗ್ರೆಸ್ ಪಕ್ಷ ಅಂಬೇಡ್ಕರವರನ್ನು ರಾಜಕೀಯವಾಗಿ ಹಿನ್ನಡೆ ಅನುಭವಿಸುವಂತೆ ಮಾಡಿದ ಬಗ್ಗೆ ಮಾಹಿತಿ ನೀಡಿದರು. ಅಂಬೇಡ್ಕರ್‌ಗೆ ಮಾಡಿದ ಅವಮಾನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು ಆದರೆ, ಲೋಕಸಭೆ ಕಾರ್ಯಕಲಾಯದಲ್ಲಿ ಮಾಡಿದ ವಿಚಾರವನ್ನು ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರದಾದ್ಯಂತ ಚಳುವಳಿಯ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದಿನ ಇತಿಹಾಸ ತಿಳಿಯುವ ಸೌಜನ್ಯವಿಲ್ಲ. ಅಂಬೇಡ್ಕರ್‌ ಹೆಚ್ಚು ನೊಂದುಕೊಂಡಿದ್ದರೆ ಅದಕ್ಕೆ ಮೂಲಕಾರಣ ಕಾಂಗ್ರೆಸ್ ಪಕ್ಷ ಎಂದರು.

ವಿಚಾರವಾದಿ ವಾದಿರಾಜ್ ಮಾತನಾಡಿ, ಬಿಜೆಪಿ ಸಂವಿಧಾನವನ್ನು ಬದಲಿಸಲಿ ಎಂದು ಅಪಪ್ರಚಾರವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಮಾಡುತ್ತಲೇ ಬಂದಿದೆ. ಸಂವಿಧಾನ ಕತೃ ಅಂಬೇಡ್ಕರ್‌ರವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಕಾಂಗ್ರೆಸ್ ಪಕ್ಷ ನಿರಾಕರಿಸಿತ್ತು. ಸಂವಿಧಾನ ರಚಿಸಿದ ಅಂಬೇಡ್ಕರವರೇ ಕಾಲಕ್ಕೆ ತಕ್ಕಂತೆ ಸಂವಿಧಾನವನ್ನು ಬದಲಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ. ಬದಲಾವಣೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕೆಂಬ ದೂರದೃಷ್ಠಿ ಅವರದ್ದಾಗಿತ್ತು. 75 ವರ್ಷದಲ್ಲಿ 106 ಬಾರಿ ಸಂವಿಧಾನ ತಿದ್ದುಪಡಿಯಾಗಿದ್ದು, ವಿಶೇಷವಾಗಿ ಕಾಂಗ್ರೆಸ್ ಆಡಳಿತದಲ್ಲಿ 75 ಬಾರಿ ತಿದ್ದುಪಡಿಯಾದರೆ ಕಾಂಗ್ರೆಸೇತರ ಸರ್ಕಾರಗಳು 31 ಬಾರಿ ತಿದ್ದುಪಡಿ ಮಾಡಿವೆ ಎಂದರು.

ಇಂದಿರಗಾಂಧಿಯವರು ತಮ್ಮ ಆಡಳಿತ ರಕ್ಷಣೆಗಾಗಿ ಸಂವಿಧಾನವನ್ನ ತಿದ್ದುಪಡಿ ಮಾಡಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ದೇಶದ ನಾಗರಿಕರ ಹಕ್ಕನ್ನು ಕಸಿದುಕೊಂಡರು. 1975 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಸೋತ ಅಭ್ಯರ್ಥಿ ರಾಜನಾರಾಯಣ್ ಅಲಹಬಾದ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಕೋರ್ಟ್ ರಾಜನಾರಾಯಣ ಅವರ ವಾದ ಎತ್ತಿಹಿಡಿಯಿತು. ಇದರ ವಿರುದ್ಧ ಇಂದಿರಾಗಾಂಧಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದು ಅದು ಸಹ ಅಲಹಬಾದ್‌ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು. ಇದರಿಂದ ಮುಜುಗರಕ್ಕೆ ಒಳವಾದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ರಾಷ್ಟ್ರಭಕ್ತರನ್ನು ಜೈಲಿಗೆ ಕಳಿಸಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮಾಜಿ ಶಾಸಕ ಎಸ್.ತಿಪ್ಫೇಸ್ವಾಮಿ, ಜಯಪಾಲಯ್ಯ, ಎಲೆಭದ್ರಿ, ಡಿ.ದಯಾನಂದ, ಕೆ.ಟಿ.ಕುಮಾರಸ್ವಾಮಿ, ಅನಿಲ್‌ಕುಮಾರ್, ದೇವರಾಜರೆಡ್ಡಿ, ಭಾರ್ಗವಿ ದ್ರಾವಿಡ, ಸಿ.ಎಸ್.ಪ್ರಸಾದ್, ಎನ್.ಓಬಳೇಶ್, ಎನ್.ರಘುಮೂರ್ತಿ, ಟಿ.ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.