ಸಾರಾಂಶ
ಧಾರವಾಡ:
ದೇಶ ಮತ್ತು ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಿದ್ದು, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೇವಲ ನಾವು ಭಾರತದ ಪ್ರಜೆ ಅಂದ ಮಾತ್ರಕ್ಕೆ ಕೆಲಸವಾಗದು ಎಂದು ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಚಂದ್ರ ಪೂಜಾರಿ ಹೇಳಿದರು.ನಗರದ ನಿವೃತ್ತ ನೌಕರರ ಸಂಘದಲ್ಲಿ ''''ನಮ್ಮ ಕರ್ನಾಟಕ ನಡೆದ 50 ಹೆಜ್ಜೆ-ಮುಂದಿನ ದಿಕ್ಕು ಶೀರ್ಷಿಕೆ ಅಡಿ ನಡೆದ ಈ ದಿನ ಧಾರವಾಡ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಎಲ್ಲ ಸಂಸ್ಥೆಗಳಲ್ಲೂ ಪಾಳೆಗಾರಿಕೆ ಎದ್ದು ಕಾಣುತ್ತಿದ್ದು, 70 ವರ್ಷಗಳಲ್ಲಿ ಶಿಷ್ಟಾಚಾರ ಕಲಿಸಿದ್ದು ಕಂಡಿಲ್ಲ. ದೇಶದಲ್ಲಿ ಯಾರಿಗೆ ಅನ್ಯಾಯವಾದರೂ ಅದು ನನ್ನ ಅನ್ಯಾಯ ಎಂದು ಕನಿಷ್ಠ ಕನಿಕರ ಪಡುವ ಗುಣವಾದರೂ ನಮ್ಮಲ್ಲಿರಬೇಕು. ಆ ರೀತಿಯಲ್ಲಿ ರಾಜಕೀಯ, ಮಾಧ್ಯಮಗಳು, ಶಿಕ್ಷಣ ಸಂಸ್ಥೆಗಳು ಇದೆಯೇ? ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಜೀತದಾಳುಗಳಂತೆ ಬದುಕುವ ವಾತಾವರಣವನ್ನು ಬಲಾಢ್ಯರು ಸೃಷ್ಟಿಸುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ ಹಲಗತ್ತಿ ಮಾತನಾಡಿ, ದೇಶಪ್ರೇಮದ ನೆಪದಲ್ಲಿ ಧರ್ಮದ ರಕ್ಷಣೆ ಮಾಡುತ್ತೇವೆ ಎನ್ನುವ ಯುವಕರಿಗೆ ತಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಇಂತಹ ವಾತಾವರಣ ನೋಡಿಕೊಂಡು ಬಹುತೇಕ ಪ್ರಗತಿಪರರು ಎನಿಸಿಕೊಂಡವರು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಯುವಕರನ್ನು ಸಾಮಾಜಿಕ ಚಿಂತನೆಯ ಕಡೆಗೆ ಎಳೆದು ತರುವುದಕ್ಕೆ ಜಾಗೃತ ಕಾರ್ಯಕ್ರಮಗಳ ಅವಶ್ಯವಿದೆ ಎಂದರು.
ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಹೆಣ್ಣು ಮಕ್ಕಳ ಪರ ಇರಬೇಕಿದ್ದ ಸರ್ಕಾರ ಸಣ್ಣ ಮಕ್ಕಳ ಮೇಲೆ ಅತ್ಯಾಚಾರವಾದರೂ ಮಾತನಾಡುವುದಿಲ್ಲ. ಈ ರೀತಿಯ ಪ್ರಕರಣಗಳು ಕಂಡು ಬಂದಾಗ ಚುಟುಕು ರೀತಿಯ ಸುದ್ದಿಗಳು ಬಂದು ಹೋಗುತ್ತವೆ. ಆ ಕುರಿತಾಗಿ ಮಾಧ್ಯಮ ಸಂಸ್ಥೆಗಳು ಕೂಡ ಹೆಚ್ಚು ಚರ್ಚೆ ಮಾಡುವುದಿಲ್ಲ. ಮಹಿಳೆಯರು ಅತ್ಯಾಚಾರಿಗಳ ವಿರೋಧ ಇರಬೇಕೆ ಹೊರತು ಅರೋಪಿ ಪರ ನಿಲ್ಲುವುದು ವಿಪರ್ಯಾಸ ಎಂದು ಹೇಳಿದರು.ಜಾನಪದ ವಿವಿ ಪ್ರಾಧ್ಯಾಪಕ ವೆಂಕನಗೌಡ ಪಾಟೀಲ್ ಮಾತನಾಡಿ, ಮನುಷ್ಯರಲ್ಲಿ ಒಡಕು ಉಂಟುಮಾಡುವ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನಕ್ಕೆ ಕುತ್ತು ಬಂದಿದೆ. ಅತ್ಯಾಚಾರಿಗಳನ್ನು ಮಾಲೆ ಹಾಕಿ ಸ್ವಾಗತಿಸುವ ನೀಚ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವತತ್ವ ಪ್ರಚಾರಕ ಮಲ್ಲೇಶ ಹಳಕಟ್ಟಿ ಪ್ರಾಸ್ತಾವಿಕ ಮಾತನಾಡಿ, ಈ ದಿನ ಜನರಿಂದ ಜನರಿಗಾಗಿ ಶುರುವಾದ ಮಾಧ್ಯಮವಾಗಿದೆ. ಕುವೆಂಪು ವಿಚಾರಕ್ಕೆ ಬಂದಾಗ ಅವರ ಬದುಕು ಮತ್ತು ಬರಹ ಒಂದೇ ಆಗಿತ್ತು ಎಂದರು.ಬಸವರಾಜ ಗೊರವರ, ಗ್ರಾಮೀಣ ಕೂಲಿಕಾರರ ಸಂಘಟನೆಯ ಸಂಚಾಲಕಿ ನಿಂಗಮ್ಮ ಸವಣೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಎಂ,ಕೆ. ನದಾಫ್, ಗ್ರಾಮೀಣ ಕೂಲಿಕಾರರ ಸಂಘಟನೆ ಸಂಚಾಲಕಿ ನಿಂಗಮ್ಮ ಸವಣೂರ, ಜಾಗೃತ ಕರ್ನಾಟಕ ಸಂಚಾಲಕ ಮುಸ್ತಾಕ್ಅಹ್ಮದ್ ಹಾವೇರಿಪೇಠ, ಜಾಗತಿಕ ಲಿಂಗಾಯತ ಮಹಾಸಭಾ ಸಂಚಾಲಕ ರವಿ ಬಾಗೋಡಿ, ಕೆ. ರಾಮರೆಡ್ಡಿ ಉಪಸ್ಥಿತರಿದ್ದರು.