ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಾಂಗ್ರೆಸ್ ಸರ್ಕಾರ ಸಂವಿಧಾನ ರಚನೆಗೆ ಡಾ.ಬಿ.ಆರ್ .ಅಂಬೇಡ್ಕರ್ ರವರಿಗೆ ಅವಕಾಶ ನೀಡಿತು. ಇಲ್ಲದೇ ಹೋಗಿದ್ದರೆ ಬಾಬಾ ಸಾಹೇಬರ ಕೀರ್ತಿ ಪತಾಕೆ ಇಷ್ಟೊಂದು ಎತ್ತರಕ್ಕೇರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮರೆಮಾಚಲು ಬಿಜೆಪಿಯು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾತಿ ವಿಭಾಗದ ಅಧ್ಯಕ್ಷ ಎನ್.ನರಸಿಂಹಯ್ಯ ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂನಾ ಒಪ್ಪಂದದಂತೆ ಮಹಾತ್ಮ ಗಾಂಧೀಜಿಯವರ ಸಲಹೆ ಮೇರೆಗೆ ಅಂದಿನ ಪ್ರಧಾನಿ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನ ರಚನೆಗೆ ಅಂಬೇಡ್ಕರ್ ರಿಗೆ ಅವಕಾಶ ನೀಡಿತು. ಈ ಇತಿಹಾಸ ಅರಿಯದ ಕೆಲವರು ಸುಳ್ಳು ಹೇಳುವುದರಲ್ಲಿ ಮಗ್ನರಾಗಿದ್ದಾರೆ ಎಂದರು.
ಈ ಸಮಾಜದಲ್ಲಿ ಸಮಾನತೆಯ ಹಕ್ಕನ್ನು ಪಡೆದು ಅಸ್ಪೃಶ್ಯತೆಯ ಹಂಗಿಲ್ಲದೆ ಜನ ಸಾಮಾನ್ಯರಂತೆ ಬದುಕಲು ಅವಕಾಶ ಕಲ್ಪಿಸಿದ್ದು, ಕಾಂಗ್ರೆಸ್ ಪಕ್ಷದ ಬಹುದೊಡ್ಡ ಕೊಡುಗೆ. ಸಂವಿಧಾನದ ನೆರಳಿನಲ್ಲಿ ವಿದ್ಯೆ ಕಲಿತು, ವಸತಿ, ಭೂಮಿ, ಸಮಾನ ಬದುಕು ಕಟ್ಟಿಕೊಂಡ ದೀನ ದಲಿತರಲ್ಲಿನ ಒಂದು ವಿದ್ಯಾವಂತ ವರ್ಗ ಯಾವುದೋ ಪಿತೂರಿಯಿಂದ ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಅವಮಾನ ಮಾಡಿತು, ಚುನಾವಣೆಯಲ್ಲಿ ಸೋಲಿಸಿತು, ಸತ್ತಾಗ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ ಎಂದೆಲ್ಲ ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.ಹಿಂದೂ ಮಹಿಳಾ ಬಿಲ್ ಕೋಡ್ ವಿಚಾರದಲ್ಲಿ ನೆಹರೂ ಮಂತ್ರಿ ಮಂಡಲದಲ್ಲಿ ಒಮ್ಮತ ಮೂಡದಿದ್ದಾಗ ಬೇಸತ್ತು ಅಂಬೇಡ್ಕರ್ ರಾಜೀನಾಮೆ ನೀಡಿದರು. ತಮ್ಮದೇ ಪಕ್ಷ ಕಟ್ಟಿಕೊಂಡು ಚುನಾವಣೆಯಲ್ಲಿ ಸೋತ ಬಾಬಾ ಸಾಹೇಬರಿಗೆ ಕಾಂಗ್ರೆಸ್ ನಿಂದ ಹೇಗೆ ಅನ್ಯಾಯವಾಯಿತು?
ಅಂಬೇಡ್ಕರ್ ರವರು ಬದುಕಿದ್ದಾಗಲೇ ತಮ್ಮ ಇಚ್ಛೆಯಂತೆ ಅವರ ಶವ ಸಂಸ್ಕಾರವನ್ನು ಮುಂಬೈನಲ್ಲೇ ನೆರವೇರಿಸಬೇಕೆಂದು ತಮ್ಮ ಆಪ್ತ ಕಾರ್ಯದರ್ಶಿ ಮತ್ತು ಪತ್ನಿಯಲ್ಲಿ ಹೇಳಿಕೊಂಡಿದ್ದರು. ಅದರಂತೆ ಮುಂಬೈನ ದಾದರ್ ನಲ್ಲಿ ಬೌದ್ಧ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು. ಹೀಗಿರುವಾಗ ದೆಹಲಿಯಲ್ಲಿ ಶವ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಸಂವಿಧಾನದ ಅಡಿಯಲ್ಲಿ ದಲಿತರು, ಅಸ್ಪೃಶ್ಯರು ಇತರೆ ಸಮುದಾಯದಂತೆ ಶಿಕ್ಷಿತರಾಗಿ ಉದ್ಯೋಗಸ್ಥರಾಗಿ, ಉದ್ಯಮಿಗಳಾಗಿ ಬದುಕು ಕಟ್ಟಿಕೊಳ್ಳುವುದನ್ನು ಬಿಜೆಪಿಯವರು ಸಹಿಸಿಕೊಳ್ಳುತ್ತಿಲ್ಲ. ಲೋಕಸಭೆಯಲ್ಲಿ 400 ಸ್ಥಾನ ಗೆದ್ದರೆ ಕಾನೂನಿನ ಯಾವ ಅಡೆ ತಡೆಯೂ ಇಲ್ಲದೆ ಸಂವಿಧಾನ ಬದಲಾಯಿಸಬಹುದು ಎಂಬ ಭ್ರಮೆಯಿಂದ ವಿದ್ಯಾವಂತ ದಲಿತರನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಅಂಬೇಡ್ಕರ್ ಹೆಸರನ್ನು ಎಳೆದು ತಂದು ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಸಂವಿಧಾನ ಬದಲಾವಣೆ ಮಾಡಿ ಮನುಸ್ಮೃತಿ ಜಾರಿ ತರುವುದು ಆರ್ ಎಸ್ ಎಸ್ ನ ತಂತ್ರಗಾರಿಕೆಯಾಗಿದ್ದು, ಅದನ್ನು ಮೋದಿ ಮೂಲಕ ಕಾರ್ಯಗತಗೊಳಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪರವಾಗಿದ್ದು, ಆ ಪಕ್ಷವನ್ನು ಬೆಂಬಲಿಸುವ ಕೆಲಸವನ್ನು ಎಲ್ಲ ವರ್ಗದ ಜನರು ಮಾಡಬೇಕು ಎಂದು ನರಸಿಂಹಯ್ಯ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಾಡಬಾಳ್ ಜಯರಾಮ್ , ಜಯಚಂದ್ರ, ಕ್ಯಾಸಾಪುರ ಶಿವಣ್ಣ, ನರಸಿಂಹಯ್ಯ, ರವಿಕುಮಾರ್ , ಕೃಷ್ಣ ನಾಯಕ್ , ಸಿ.ಎಚ್ .ಮಾರುತಿ, ಬಿ.ಟಿ.ವೆಂಕಟೇಶ್ , ಗೋಪಿ, ಚಂದ್ರಪ್ಪ, ಸಿದ್ಧಾರ್ಥ ಇದ್ದರು.
‘ದೇಶದಲ್ಲಿ ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಉದ್ಯೋಗದಲ್ಲಿ ಮೀಸಲಾತಿ ನೀಡಬಾರದೆಂಬ ಕಾರಣಕ್ಕೆ ಎಲ್ಲ ಉದ್ಯಮಗಳನ್ನು ಖಾಸಗೀಕರಣ ಮಾಡಿ ದಲಿತರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಉನ್ನತ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮುಕ್ತ ದಾಖಲಾತಿ ನಿರಾಕರಿಸಲಾಗುತ್ತಿದೆ. ದುರ್ಬಲರ, ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಮಹಿಳೆಯರ ಮತ್ತು ಮಕ್ಕಳ ಪರ ದೂರದೃಷ್ಟಿಯುಳ್ಳ ಕಾಂಗ್ರೆಸ್ ಪಕ್ಷವೊಂದೇ ಇಂದಿನ ಪರಿಹಾರ.’- ಎನ್ .ನರಸಿಂಹಯ್ಯ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾತಿ ವಿಭಾಗ, ರಾಮನಗರ.