ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಉಪ್ಪಾರ ಸಮಾಜಕ್ಕೆ ಹೆಚ್ಚಿನ ರಾಜಕೀಯ ಸ್ಥಾನಮಾನವು ಕಾಂಗ್ರೆಸ್‌ಗೆ ದೊರೆತಿದೆ. ಉಪ್ಪಾರ ಸಮಾಜ ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಬನ್ನಿತಾಳಪುರ, ನೇನೇಕಟ್ಟೆ, ಆಲತ್ತೂರು, ಬರಗಿ, ಮೂಖಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿ, ಚಾಮರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಬೇರೆ ಪಕ್ಷದಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.ಉಪ್ಪಾರ ಸಮಾಜ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ನನಗೆ ಮತ ನೀಡಿದ್ದೀರಿ. ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ರನ್ನು ಬೆಂಬಲಿಸಿದರೆ ನನಗೆ ಶಕ್ತಿ ಬರಲಿದೆ ಎಂದರು. ಕ್ಷೇತ್ರದಲ್ಲಿ ನನಗೆ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಎಲ್ಲಾ ವರ್ಗಗಳು ನೀಡಿವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೆಚ್ಚಿನ ಮತಗಳಿಂದ ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೆಗೊಳಿಸುವ ಮೂಲಕ ನುಡಿದಂತೆ ಕಾಂಗ್ರೆಸ್ ಪಕ್ಷ ನಡೆದುಕೊಂಡಿದೆ ಕೊಟ್ಟ ಭರವಸೆ ಈಡೇರಿಸಿದೆ ಎಂದರು. ನನ್ನ ತಾಯಿ ಡಾ.ಗೀತಾಮಹದೇವ ಪ್ರಸಾದ್ ಸೋತಾಗಲೂ ಕ್ಷೇತ್ರ ಬಿಡದೆ ದಿ.ಎಚ್.ಎಸ್.ಮಹದೇವಪ್ರಸಾದ್ ನಂಬಿದ ಕಾರ್ಯಕರ್ತರ ಬೆನ್ನಿಗೆ ನಿಂತೆ. ಕ್ಷೇತ್ರದ ಜನ ನಿರೀಕ್ಷೆಗೂ ನನ್ನ ಕೈ ಹಿಡಿದ ರೀತಿಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೂ ಹೆಚ್ಚು ಮತ ಹಾಕುವಂತೆ ಮನವಿ ಮಾಡಿದರು.ಐದು ಗ್ಯಾರಂಟಿಗಳು ಜನರ ಮನಸ್ಸಿಗೆ ತಲುಪಿವೆ. ಕಾಂಗ್ರೆಸ್ ಭರವಸೆಗಳಿಗೆ ಮಹಿಳೆಯರು ಹೆಚ್ಚಿನ ಮತ ನೀಡಿದ್ದರು. ಈಗ ಭರವಸೆ ಈಡೇರಿದೆ. ಹಾಗಾಗಿ ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ನನ್ನ ಕೈ ಬಲಪಡಿಸಿ ಎಂದರು.
ಅಭಿವೃದ್ಧಿ ನಿಂತಿಲ್ಲ: ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆ ಜಾರಿಯಾಗಲು ಕೆಲ ತಿಂಗಳು ಅಭಿವೃದ್ಧಿ ಸ್ವಲ್ಪ ಹಿನ್ನೆಡೆಯಾಗಿತ್ತು. ಆದರೀಗ ಕ್ಷೇತ್ರದಲ್ಲಿ ನೂರು ಕೋಟಿಗೂ ಹೆಚ್ಚು ಅನುದಾನ ಬಂದಿದೆ. ವಿಪಕ್ಷಗಳು ವಾಸ್ತವಾಂಶ ಅರಿಯದೆ ಟೀಕಿಸುತ್ತಿದೆ ಎಂದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎಂ.ಮುನಿರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲತ್ತೂರು ಜಯರಾಂ, ಮುಖಂಡರಾದ ಮಂಚಹಳ್ಳಿ ಲೋಕೇಶ್, ಎನ್.ಎಂ.ಗಂಗಾಧರಪ್ಪ, ಬರಗಿ ಮಹೇಶ್, ಮಡಹಳ್ಳಿ ಶಿವಮೂರ್ತಿ ಸೇರಿದಂತೆ ಹಲವರಿದ್ದರು.ಇಂದಿನ ಸಿಎಂ ಸಭೆಗೆ ಬನ್ನಿ: ಶಾಸಕ ಗಣೇಶ್‌ಗುಂಡ್ಲುಪೇಟೆ: ಚಾಮರಾಜನಗರ ಲೋಕಸಭೆ ಅಭ್ಯರ್ಥಿ ಸುನೀಲ್ ಬೋಸ್‌ಪರ ಸಿಎಂ ಸಿದ್ದರಾಮಯ್ಯ ಏ.೧೨ ರಂದು ಗುಂಡ್ಲುಪೇಟೆ-ನಂಜನಗೂಡು ಕ್ಷೇತ್ರದ ಕಾರ್ಯಕರ್ತರ ಸಭೆ ನಂಜನಗೂಡು ಬಳಿಯ ಕಳಲೆ ಗೇಟ್ ಬಳಿ ನಡೆಯಲಿದ್ದು ಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕರೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ಧ ವಿಪಕ್ಷಗಳು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿವೆ. ಇದಕ್ಕೆಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ತಲೆ ಕೆಡಿಸಿಕೊಳ್ಳದೆ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸಿ ಎಂದರು.