ಕಾಂಗ್ರೆಸ್ಸಿಗೆ ಸಮರ್ಥ ನಾಯಕತ್ವ ಇಲ್ಲ: ಕಾಗೇರಿ

| Published : May 06 2024, 12:36 AM IST

ಸಾರಾಂಶ

ಬಿಜೆಪಿಯಲ್ಲಿ ನಾಯಕತ್ವ ಅತ್ಯಂತ ಸಮರ್ಥವಾಗಿದೆ. ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ದೇಶ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ನಡೆಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಯಲ್ಲಾಪುರ: ಭಾರತದ ಪ್ರಜಾಪ್ರಭುತ್ವ ಇಡೀ ಜಗತ್ತಿಗೆ ಮಾದರಿ. ಕಾಂಗ್ರೆಸ್ಸಿಗೆ ಸಮರ್ಥ ನಾಯಕತ್ವ ಇಲ್ಲ. ಆದರೆ ಬಿಜೆಪಿಗೆ ನರೇಂದ್ರ ಮೋದಿಯಂಥ ನಾಯಕತ್ವ ದೊರೆತಿದೆ. ದೇಶದ ಭವಿಷ್ಯ ಬರೆಯುವ ಚುನಾವಣೆ ಎಂದು ಲೋಕಸಭಾ ಚುನಾವಣೆಯ ಉತ್ತರಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಭಾನುವಾರ ತಾಲೂಕಿನ‌ ಮಂಚಿಕೇರಿ ಗ್ರಾಮದಲ್ಲಿ ವಿವಿಧೆಡೆ ಚುನಾವಣಾ ಪ್ರಚಾರ ಸಭೆ‌ ನಡೆಸಿ‌ ಮತದಾರರನ್ನುದ್ದೇಶಿಸಿ ಮಾತನಾಡಿ, ಬಿಜೆಪಿಯಲ್ಲಿ ನಾಯಕತ್ವ ಅತ್ಯಂತ ಸಮರ್ಥವಾಗಿದೆ. ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ದೇಶ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ನಡೆಸಿದ್ದಾರೆ. ಅವರ‌ ಮೂಲಕ ಭಾರತೀಯರಿಗೆ ಜಗತ್ತಿನ ಎಲ್ಲ ಅತ್ಯುನ್ನತ ಗೌರವ ಸಿಕ್ಕಿದೆ. ಆದರೆ ರಾಹುಲ್ ಗಾಂಧಿ ಬೇರೆ ದೇಶಕ್ಕೆ ಹೋಗಿ ನಮ್ಮ ದೇಶವನ್ನು ಹಿಯಾಳಿಸುತ್ತಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಶಕ್ತಶಾಲಿಯಾಗಿದ್ದು, ಪಾಕಿಸ್ತಾನದಿಂದ ಅಭಿನವ್ ಅವರನ್ನು ಬಿಡಿಸಿದ್ದು, ಏಳು ಜನ ಕತಾರ್‌ದಿಂದ ಬಿಡಿಸಿ ತರುವ ಮೂಲಕ‌ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಮ್ಮ ಸನಾತನ ಧರ್ಮ ಉಳಿಯಲು ಮೋದಿಜಿಯವರು ಮತ್ತೆ ಪ್ರಧಾನಿಯಾಗಬೇಕು. ಅಭಿವೃದ್ಧಿ ಅತ್ಯಂತ ವೇಗವಾಗಿ ಆಗಿದೆ ಎಂದರು.

ವಿಧಾನ‌ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ಜಿಪಂ ಮಾಜಿ ಸದಸ್ಯೆ ರೂಪಾ ಬೂರ್ಮನೆ ಹಾಗೂ ಮಂಚಿಕೇರಿ ಭಾಗದ ಬಿಜೆಪಿ ಪ್ರಮುಖರು ಕಾರ್ಯಕರ್ತರು ಇದ್ದರು.

ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ: ಸುನೀಲ ಹೆಗಡೆ

ಹಳಿಯಾಳ:ತಾಲೂಕು ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ. ನಮ್ಮದು ಒಂದೇ ಮನೆ, ಒಂದೇ ಬಾಗಿಲು. ಜಿಲ್ಲಾಧ್ಯಕ್ಷರು ಮತ್ತು ತಾಲೂಕಾಧ್ಯಕ್ಷ ಮುಂದಾಳತ್ವದಲ್ಲಿ ಪದಾಧಿಕಾರಿಗಳು ಕಾರ್ಯಕರ್ತರು ಪಕ್ಷ ಸಂಘಟನೆ ಹಾಗೂ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ನೀತಿ, ನಿಯಮಾವಳಿಗಳನ್ನು ಅರಿತುಕೊಂಡು ಚೌಕಟ್ಟಿನೊಳಗೆ ಕೆಲಸ ಮಾಡಬೇಕಾಗುತ್ತದೆ. ಅದೇ ಪ್ರಕಾರ ನಾವು ಪಕ್ಷದ ಚೌಕಟ್ಟಿನೊಳಗೆ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.ಬಿಜೆಪಿ ಸೇರಿಲ್ಲ: ಬಿಜೆಪಿ ಮತ್ತು ಜೆಡಿಎಸ್ ಪಕ್ಷವು ಚುನಾವಣಾ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರೆಲ್ಲರೂ ಜೆಡಿಎಸ್‌ನಲ್ಲಿಯೇ ಇದ್ದುಕೊಂಡು ನಮಗೆ ಬೆಂಬಲ ನೀಡುತ್ತಿದ್ದಾರೆ. ಹಳಿಯಾಳದಲ್ಲಿ ಯಾವುದೇ ಜೆಡಿಎಸ್ ಮುಖಂಡರಾಗಲಿ ಅಥವಾ ಕಾರ್ಯಕರ್ತರಾಗಲಿ ಬಿಜೆಪಿಗೆ ಸೇರ್ಪಡೆಯಾಗಲಿಲ್ಲ. ಅವರನ್ನು ಪಕ್ಷಕ್ಕೇ ಸೇರ್ಪಡೆ ಮಾಡಲು ಸಹ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಹಿರಿಯ ಮುಖಂಡರಾದ ಮಂಗೇಶ ದೇಶಪಾಂಡೆ, ಶಿವಾಜಿ ಪಾಟೀಲ, ತಾನಾಜಿ ಪಟ್ಟೇಕರ, ಶ್ರೀಕಾಂತ ಸೋನಾರ್, ರವಿ ಚಿಬುಲಕರ, ಮಾರುತಿ ಸಾವಂತ, ಪಾಂಡು ಪಾಟೀಲ ಹಾಗೂ ಇತರರು ಇದ್ದರು.