ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ತಾಲೂಕು, ಮಂಡಳ ಹಾಗೂ ಬೂತ್ ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಮತ್ತು ನೂತನ ಪದಾಧಿಕಾರಿಗಳ ನೇಮಕಕ್ಕಾಗಿ ಜಿಲ್ಲೆಯಾದ್ಯಂತ ಸಂಘಟನ್ ಸೃಜನ್ ಅಭಿಯಾನ-2 ಆರಂಭಿಸಲಾಗಿದ್ದು, ಮೊದಲ ಅಭಿಯಾನದಲ್ಲಿ ಯಾವ ರೀತಿಯ ಡಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತೋ ಅದೇ ಮಾದರಿಯಲ್ಲಿ ವಿವಿಧ ತಾಲೂಕು ಬ್ಲಾಕ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ರಾಯಚೂರು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ರಾಜಶೇಖರ ಪಾಟೀಲ್ ಹುಮನಾಬಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ತಾಲೂಕು, ಮಂಡಳ ಹಾಗೂ ಬೂತ್ ಮಟ್ಟದಲ್ಲಿ ಸಂಘಟನೆ ಬಲವರ್ಧನೆ ಮತ್ತು ನೂತನ ಪದಾಧಿಕಾರಿಗಳ ನೇಮಕಕ್ಕಾಗಿ ಜಿಲ್ಲೆಯಾದ್ಯಂತ ಸಂಘಟನ್ ಸೃಜನ್ ಅಭಿಯಾನ-2 ಆರಂಭಿಸಲಾಗಿದ್ದು, ಮೊದಲ ಅಭಿಯಾನದಲ್ಲಿ ಯಾವ ರೀತಿಯ ಡಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತೋ ಅದೇ ಮಾದರಿಯಲ್ಲಿ ವಿವಿಧ ತಾಲೂಕು ಬ್ಲಾಕ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ರಾಯಚೂರು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ರಾಜಶೇಖರ ಪಾಟೀಲ್ ಹುಮನಾಬಾದ್ ತಿಳಿಸಿದರು.ಭಾನುವಾರ ಸ್ಥಳೀಯ ಡಿಸಿಸಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನ್ ಸೃಜನ್ ಅಭಿಯಾನ-1ರ ಮೂಲಕ ದೇಶದಾದ್ಯಂತ 1,100 ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇದೀಗ ಅಭಿಯಾನ-2ರ ಭಾಗವಾಗಿ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಸಾಮರ್ಥ್ಯ ಹೊಂದಿರುವ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ. ತಾಲೂಕು ಬ್ಲಾಕ್ ಅಧ್ಯಕ್ಷರ ನೇಮಕಕ್ಕಾಗಿ ಮೂರರಿಂದ ಐದು ಹೆಸರುಗಳನ್ನು ಸೂಚಿಸುವಂತೆ ಕೆಪಿಸಿಸಿ ತಿಳಿಸಿದೆ ಎಂದು ಹೇಳಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಯುವಕರಿಗೆ ಸಂಘಟನೆಯಲ್ಲಿ ಸೂಕ್ತ ಅವಕಾಶ ಕಲ್ಪಿಸುವಂತೆ ಕೆಪಿಸಿಸಿ ಸೂಚಿಸಿದೆ. ಪಕ್ಷದಲ್ಲಿನ ಭಿನ್ನಮತಗಳನ್ನು ಸರಿಪಡಿಸಿ, ಕಾರ್ಯಕರ್ತರು ಮತ್ತು ಮುಖಂಡರ ಸಲಹೆಗಳನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಕೆಪಿಸಿಸಿ ಮಾರ್ಗಸೂಚಿಯಂತೆ ಈ ಸಂಪೂರ್ಣ ಪ್ರಕ್ರಿಯೆ ನಡೆಯಲಿದ್ದು, ಹಿಂದೆ ಜಿಲ್ಲಾಧ್ಯಕ್ಷರ ನೇಮಕಾತಿಯನ್ನೂ ಇದೇ ಅಭಿಯಾನದ ಮೂಲಕ ನಡೆಸಲಾಗಿತ್ತು. ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ಕೆಪಿಸಿಸಿ ಆದೇಶದ ಮೇರೆಗೆ ತಾಲೂಕು ಹಾಗೂ ಮಂಡಳ ಮಟ್ಟದ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಮೇಲ್ವಿಚಾರಣೆಗಾಗಿ ತಮ್ಮನ್ನು ಒಳಗೊಂಡಂತೆ ಕೆಪಿಸಿಸಿ ಉಪಾಧ್ಯಕ್ಷ ಜಾನ್ ವೆಸ್ಲಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ. ಕುಮಾರನಾಯಕ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಶಾಂತಪ್ಪ, ನಿರ್ಮಲಾ ಬೆಣ್ಣೆ, ಜಯಣ್ಣ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಜಿ. ಶಿವಮೂರ್ತಿ, ಡಾ.ರಜಾಕ್ ಉಸ್ತಾದ್ ಹಾಗೂ ಶ್ರೀನಿವಾಸ ರೆಡ್ಡಿ ಸೇರಿ ವಿವಿಧ ಬ್ಲಾಕ್ ಸಮಿತಿಯವರು, ಕಾರ್ಯಕರ್ತರು ಇದ್ದರು.