ಸ್ವಂತ ಪಿಸ್ತೂಲ್‌ನಿಂದ ಗುಂಡು ಸಿಡಿದು ಕಾಂಗ್ರೆಸ್‌ ಮುಖಂಡನಿಗೆ ಗಾಯ

| Published : Feb 05 2025, 12:35 AM IST

ಸ್ವಂತ ಪಿಸ್ತೂಲ್‌ನಿಂದ ಗುಂಡು ಸಿಡಿದು ಕಾಂಗ್ರೆಸ್‌ ಮುಖಂಡನಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಪಿಸ್ತೂಲಿನಿಂದ‌ ಉಂಟಾದ ಫೈರಿಂಗ್‌ನಿಂದ ಕಾಂಗ್ರೆಸ್‌ ಮುಖಂಡ ಗಾಯಗೊಂಡ‌ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಾಂಗ್ರೆಸ್ ಮುಖಂಡ ಚಿತ್ತರಂಜನ್‌ ಶೆಟ್ಟಿ ಗಾಯಗೊಂಡವರಾಗಿದ್ದು, ಪಡೀಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತನ್ನ ಪಿಸ್ತೂಲಿನಿಂದ‌ ಉಂಟಾದ ಫೈರಿಂಗ್‌ನಿಂದ ಕಾಂಗ್ರೆಸ್‌ ಮುಖಂಡ ಗಾಯಗೊಂಡ‌ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಾಂಗ್ರೆಸ್ ಮುಖಂಡ ಚಿತ್ತರಂಜನ್‌ ಶೆಟ್ಟಿ ಗಾಯಗೊಂಡವರಾಗಿದ್ದು, ಪಡೀಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರವಾನಗಿ ಸಹಿತ ಪಿಸ್ತೂಲು ಹೊಂದಿದ್ದ ಚಿತ್ತರಂಜನ್ ಅವರು, ಮದುವೆಯೊಂದರ ಆಮಂತ್ರಣ ನೀಡಲು ಮಂಗಳವಾರ ಮಧ್ಯಾಹ್ನ ಅನಂತಾಡಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ , ಹತ್ತಿರದಲ್ಲೇ ಇದ್ದ ಜಲ್ಲಿ ಕ್ವಾರಿಗೆ ಹೋಗಿ ಅವರಿಗಾಗಿ ಕಚೇರಿಯಲ್ಲಿ ಕಾಯುತ್ತಿದ್ದರು. ಇದೇ ವೇಳೆ ತನ್ನ ಸೊಂಟದಲ್ಲಿದ್ದ ಪಿಸ್ತೂಲನ್ನು ಬಟ್ಟೆಯಿಂದ ಒರೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್ ಅದುಮಲ್ಪಟ್ಟು, ಅದರಿಂದ ಗುಂಡು ಸಿಡಿದು ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ವಿಟ್ಲ ಪೊಲೀಸರು ಸ್ಥಳಪರಿಶೀಲನೆ ನಡೆಸಿದ್ದಾರೆ.ಅಗ್ನಿ ದುರಂತ:

ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಇಳಂತಿಲ ಭಾಗದಲ್ಲಿರುವ ಎವರೆಸ್ಟ್ ಮರದ ಮಿಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಯಂತ್ರೋಪಕರಣಗಳ ಸಹಿತ ಮರಮಟ್ಟು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ನಸುಕಿನ ವೇಳೆ ಸಂಭವಿಸಿದೆ.ಯು.ಟಿ. ಫಯಾಜ್‌ ಅಹಮ್ಮದ್‌ ಒಡೆತನದ ಈ ಮರದ ಮಿಲ್‌ನಲ್ಲಿ ವಿದ್ಯುತ್ ಮೀಟರ್ ಬಳಿಯಿಂದ ಮಧ್ಯರಾತ್ರಿ ಸುಮಾರಿಗೆ ಮೂಡಿದ ಬೆಂಕಿ ಸೊತ್ತುಗಳನ್ನು ಆಹುತಿ ತೆಗೆದುಕೊಂಡಿತ್ತು. ನಸುಕಿನ ೫ ಗಂಟೆ ಸುಮಾರಿಗೆ ಮಿಲ್ಲಿನಿಂದ ಹೊಗೆ ಬರುತ್ತಿರುವುದನ್ನು ಕಂಡು ಸ್ಥಳಕ್ಕೆ ಧಾವಿಸಿದ ಮಾಲಕರಿಗೆ ಮಿಲ್ಲಿನೊಳಗೆ ಅಗ್ನಿ ಅನಾಹುತ ಸಂಭವಿಸಿದ್ದು ಕಂಡು ಬಂದು, ಸಮೀಪದಲ್ಲೇ ಇದ್ದ ನೀರಿನ ವ್ಯವಸ್ಥೆ ಬಳಸಿ ಬೆಂಕಿ ವಿಸ್ತರಿಸದಂತೆ ತಡೆದು ಇನ್ನಷ್ಟು ಹಾನಿ ತಪ್ಪಿಸಿದರು.ಘಟನೆಯಿಂದ ಸುಮಾರು ೬ ಲಕ್ಷ ರು. ನಷ್ಟ ಅಂದಾಜಿಸಲಾಗಿದೆ.

ಆಪದ್ಬಾಂಧವ ಫಯಾಜ್‌:ಉದ್ಯಮಿ ಯು ಟಿ ಫಯಾಜ್ ಅಹಮ್ಮದ್ ಪರಿಸರದಲ್ಲಿ ಯಾವುದೇ ಅವಘಡ ಸಂಭವಿಸಲಿ ಮಿಂಚಿನ ವೇಗದಲ್ಲಿ ಧಾವಿಸಿ ಬಂದು ರಕ್ಷಣಾ ಕಾರ್ಯಕ್ಕೆ ಮುಂದಾಗುವ ವ್ಯಕ್ತಿ. ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ನಾಲ್ಕೈದು ವಿದ್ಯುತ್ ಅವಘಡದ ಸನ್ನಿವೇಶದಲ್ಲೂ ಇವರದ್ದು ಮುಂಚೂಣಿಯ ಪರಿಹಾರ ಕಾರ್ಯಾಚರಣೆ ಕಂಡು ಬಂದಿತ್ತು. ಆದರೆ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಘಟನೆಯಲ್ಲಿ ಸ್ವತಃ ಅವರದ್ದೇ ಮರದ ಮಿಲ್ಲಿನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ನಾಗರಿಕರಲ್ಲಿ ಬೇಸರ ಮೂಡಿಸಿದೆ.