ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ ನಿಧನ

| Published : Apr 24 2025, 11:46 PM IST

ಸಾರಾಂಶ

5 ದಶಕಗಳ ಕಾಲ ರಾಜಕೀಯದಲ್ಲಿದ್ದ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಗುರುವಾರ ನಿಧನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

5 ದಶಕಗಳ ಕಾಲ ರಾಜಕೀಯದಲ್ಲಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಿಟ್ಟು ಚಂಗಪ್ಪ (83) ಗುರುವಾರ ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಿಟ್ಟು ಚಂಗಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾಹಿತಿ ನೀಡಿದ್ದಾರೆ.

ಮಿಟ್ಟು ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೖಹ ಸಚಿವ ಜಿ. ಪರಮೇಶ್ವರ್, ಸಚಿವ ದಿನೇಶ್ ಗುಂಡೂರಾವ್, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ. ಮಂತರ್ ಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೖಷಿಕರಾಗಿ, ಕಾಫಿ ಉದ್ಯಮಿಯಾಗಿ ಗಮನ ಸೆಳೆದಿದ್ದ ವಿಶೇಷ ವ್ಯಕ್ತಿತ್ವದ ಮಿಟ್ಟು ಚಂಗಪ್ಪ ಅವರು ಮಡಿಕೇರಿ ಪುರಸಭೆ, ಎಂ.ಎಲ್.ಸಿ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ ರಾಜಕೀಯದಿಂದ ಹತಾಶರಾಗದೇ ಕಿಂಗ್ ಮೇಕರ್ ಆಗಿ ಕಂಗೊಳಿಸಿದ್ದರು.

ಇಂದಿರಾಗಾಂಧಿ, ಗುಂಡೂರಾವ್, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್, ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆಲ್ಲರಿಗೂ ಮಿಟ್ಟು ಚಂಗಪ್ಪ ಆತ್ಮೀಯರಾಗಿದ್ದರು.

ವಿನೋದ್ ಶಿವಪ್ಪ ಅವರ ಆತ್ಮೀಯ ಗೆಳೆಯರಾಗಿದ್ದ ಮಿಟ್ಟು ಚಂಗಪ್ಪ ಅವರ ತೋಟದ ಬಂಗಲೆಗೆ ಬರುತ್ತಿದ್ದ ಸೂಪರ್ ಸ್ಟಾರ್ ರಜನೀಕಾಂತ್, ಸಾಹಸ ಸಿಂಹ ವಿಷ್ಣುವಧ೯ನ್, ರೆಬೆಲ್ ಸ್ಟಾರ್ ಅಂಬರೀಷ್ ಅವರ ಸ್ನೇಹಿತರೂ ಆಗಿದ್ದರು.

32 ಚುನಾವಣೆಗಳಲ್ಲಿಯೂ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಿ ಮಿಟ್ಟುಚಂಗಪ್ಪ ಮತದಾನ ಜಾಗ್ರತಿಯ ರಾಯಭಾರಿಯಂತೆ ಗಮನಸೆಳೆದಿದ್ದರು.

ಕೆಲ ತಿಂಗಳಿನಿಂದ ಅನಾರೋಗ್ಯಕ್ಕೊಳಗಾಗಿ ಮುಳ್ಳುಸೋಗೆ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದ ಮಿಟ್ಟು ಚಂಗಪ್ಪ ಅವರನ್ನು ಮಂಗಳವಾರ ರಾತ್ರಿ ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಮೃತರು ಪತ್ನಿ ಯಶಿಕಾ, ಪುತ್ರಿಯರಾದ ಕಾವ್ಯ ಮತ್ತು ಕೃತಿಯನ್ನು ಅಗಲಿದ್ದಾರೆ.

ಕೆಪಿಸಿಸಿ, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಮುಖರು ಮಿಟ್ಟು ಚಂಗಪ್ಪ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಮಾಜಿ ಉಪಾಧ್ಯಕ್ಷರು, ಉದ್ಯಮಿ, ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದ ಹಿರಿಯ ಮುತ್ಸದಿ ರಾಜಕಾರಣಿ ಮಿಟ್ಟು ಚಂಗಪ್ಪ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ. ಇವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಅಪಾರ ಬಂಧು ಬಳಗಕ್ಕೆ, ಅಭಿಮಾನಿ ವರ್ಗಕ್ಕೆ ಮತ್ತು ಕುಟುಂಬದವರಿಗೆ ಆ ಸರ್ವಶಕ್ತ ಭಗವಂತ ಕರುಣಿಸಲಿ ಮತ್ತು ಮೃತರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.