ಸಾರಾಂಶ
ಕೆರೆಕಟ್ಟೆಗಳ ಹೂಳು ತೆಗೆದು ಹೆಚ್ಚು ನೀರು ಸಂಗ್ರಹವಾಗುವಂತೆ ತಾವು ಕ್ರಮ ವಹಿಸುವಂತೆ ಡಿಸಿಎಂ ಬಳಿ ಕಾಂಗ್ರೆಸ್ ಮುಖಂಡರ ಕೋರಿಕೆ.
ಮದ್ದೂರು : ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲೆ ಮತ್ತು ಕೆರೆಕಟ್ಟೆಗಳ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು.
ಕೆಆರ್‌ಎಸ್ ವೀಕ್ಷಣೆಗೆ ತೆರಳುತ್ತಿದ್ದ ಉಪ ಮುಖ್ಯಮಂತ್ರಿ ಅವರನ್ನು ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ಜಿಲ್ಲೆಯ ಗಡಿಭಾಗ ತಾಲೂಕಿನ ನಿಡಘಟ್ಟ ಬಳಿ ಅಭಿನಂದನೆ ಸಲ್ಲಿಸಿದ ಬಳಿಕ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕ್ಷೇತ್ರ ವ್ಯಾಪ್ತಿ ಬಹುತೇಕ ನಾಲೆಗಳು ಶಿಥಿಲಗೊಂಡಿವೆ. ಇದರಿಂದ ನಾಲೆಗಳ ಮೂಲಕ ಹರಿಯುವ ನೀರು ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಹೀಗಾಗಿ ನಾಲೆಗಳ ಆಧುನಿಕರಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಬೇಡಿಕೆ ಮಂಡಿಸಿದರು.
ಕೆರೆಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿರುವ ಕಾರಣ ಬೇಸಿಗೆ ಕಾಲದಲ್ಲಿ ರೈತರ ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳ ಹೂಳು ತೆಗೆದು ಹೆಚ್ಚು ನೀರು ಸಂಗ್ರಹವಾಗುವಂತೆ ತಾವು ಕ್ರಮ ವಹಿಸುವಂತೆ ಡಿಸಿಎಂ ಬಳಿ ಕೋರಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ನಾಲೆಗಳ ಆಧುನಿಕರಣ ಕೆರೆಕಟ್ಟೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡರಾದ ಕೆ.ದಾಸೇಗೌಡ, ಸಿ.ನಾಗೇಗೌಡ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಮಲ್ಲನಕುಪ್ಪೆ ಗ್ರಾಪಂ ಅಧ್ಯಕ್ಷ ಇಂದ್ರ ರವಿಕುಮಾರ್, ಮುಖಂಡರಾದ ಯೋಗೇಶ್, ಚಾಕನಕೆರೆ ಕುಮಾರ್, ಕೆ.ಆರ್.ಅಭಿಲಾಶ್ ಮತ್ತಿತರರು ಇದ್ದರು.