ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ಪಾಕಿಸ್ತಾನದ ಜೊತೆ ಸಂಪರ್ಕ ಇದೆ ಎಂದು ತೆಲಂಗಾಣದ ಶಾಸಕರಾದ ರಾಜಾ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.ಗುರುಮಠಕಲ್‌ನ ತಲಾರಿ ಲೇಔಟ್‌ನಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಸಚಿವರೊಬ್ಬರು ಭಾರತದಲ್ಲಿ ಮೋದಿಯವರನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಹೇಳಿಕೆ ನೀಡಿರುವುದೇ ಇದಕ್ಕೆ ಪುಷ್ಠಿ ನೀಡಿದೆ ಎಂದು ಆರೋಪಿಸಿದರು. ಮೋದಿಯವರನ್ನು ಸೋಲಿಸಿ ಪದಚ್ಯುತಗೊಳಿಸಲು ದೊಡ್ಡ ಶಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಗೆದ್ದ ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಾರೆಂದರು.
ನಲವತ್ತು ವರ್ಷಗಳ ಕಾಲ ಗುರುಮಠಕಲ್ ಮತಕ್ಷೇತ್ರದಿಂದ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಆಡಳಿತ ಮಾಡಿದ್ದಾರೆ. ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ? ಖರ್ಗೆ ಗುರುಮಠಕಲ್‌ಗೆ ಶಿಕ್ಷಣ, ಶಿಕ್ಷಣ ಸಂಸ್ಥೆ ನೀಡಿಲ್ಲ, ಉದ್ಯೋಗ ಸೃಷ್ಟಿ ಮಾಡಿಲ್ಲ. ತಮ್ಮ ಲಾಭಕ್ಕಾಗಿ ರಾಜಕೀಯ ಮಾಡಿದ್ದಾರೆಂದರು.ಮುಸ್ಲಿಂ ತಾಯಂದಿರ ಶತಮಾನಗಳ ಶಾಪವಾಗಿದ್ದ ತ್ರಿಬಲ್ ತಲಾಕ್ ರದ್ದು ಮಾಡಿದವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಕಾನೂನನ್ನು ನೀವು ಮತ್ತೆ ಜಾರಿ ಮಾಡುತ್ತೀರಾ? ಶಾಂತಿ ನೆಮ್ಮದಿ ನೆಲೆಸಿರುವ ಕಾಶ್ಮೀರಕ್ಕೆ ಅನ್ವಯಗೊಳಿಸಿದ 370ನೇ ವಿಧಿಯನ್ನು ಮತ್ತೆ ಅನುಷ್ಠಾನಕ್ಕೆ ತರುತ್ತಿರಾ ಎಂಬುದನ್ನು ಸಾರ್ವಜನಿಕರಿಗೆ ಕಾಂಗ್ರೆಸ್ ತಿಳಿಸಲಿ ಎಂದರು.
ಈ ಬಾರಿ ಚುನಾವಣೆಯಲ್ಲಿ ಕಲಬುರ್ಗಿಯಲ್ಲಿ ಉಮೇಶ್ ಜಾಧವ್‌ಗೆ ಮತ ನೀಡುವುದರ ಮೂಲಕ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕೆಂದರು.ಬಿಜೆಪಿಯ ಯುವ ಮುಖಂಡರಾದ ನಿತಿನ್ ಗುತ್ತೇದಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜು ಗುತ್ತೇದಾರ್, ಬಿಜೆಪಿ ನಾಯಕರಾದ ಶರಣಪ್ಪ ಹದನೂರ್, ಲಲಿತ ಅನಪೂರ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ಮಾತನಾಡಿದರು. ಶಾಸಕರಾದ ರಾಜಾ ಸಿಂಗ್ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರನ್ನು ಮೆರವಣಿಗೆಯಲ್ಲಿ ಸಮಾರಂಭದ ವೇದಿಕೆ ವರೆಗೆ ಕರೆತರಲಾಯಿತು.
ಬಿಜೆಪಿ ಅಲೆ ಕಂಡು ಕಾಂಗ್ರೆಸ್‌ಗೆ ನಿದ್ದೆ ಕೆಟ್ಟಿದೆ: ಜಾಧವ್ಲೋಕಸಭಾ ಕ್ಷೇತ್ರದಲ್ಲಿ ಗುರುಮಠಕಲ್ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಅಲೆ ಕಂಡು ಕಾಂಗ್ರೆಸ್‌ಗೆ ನಿದ್ದೆ ಕೆಟ್ಟಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಹೇಳಿದರು.
ಗುರುಮಠಕಲ್ ಸಾರ್ವಜನಿಕ ಸಭೆಗೆ ಆಗಮಿಸಿದ ಸಹಸ್ರ ಸಂಖ್ಯೆಯ ಜನರನ್ನು ನೋಡಿ ಮಲ್ಲಿಕಾರ್ಜುನ ಖರ್ಗೆ ಪ್ರಿಯಾಂಕ ಖರ್ಗೆ ಸೇರಿದಂತೆ ಕಾಂಗ್ರೆಸ್ಸಿನವರ ನಿದ್ದೆ ಹಾರಿದೆ. ಹತ್ತು ಸಾವಿರಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿಗರು ಬಹಿರಂಗ ಸಭೆಯಲ್ಲಿ ಹಾಜರಾಗಿ ಬಿಜೆಪಿಗೆ ಭಾರಿ ಬೆಂಬಲವನ್ನು ವ್ಯಕ್ತಪಡಿಸಿರುವುದು ಖರ್ಗೆಯವರು ಗುರುಮಠಕಲ್ ಗೆ ಮಾಡಿದ ಮೋಸಕ್ಕೆ ಪ್ರತಿಕಾರದ ರೂಪ ಎಂದು ಜಾಧವ್ ಹೇಳಿದರು.ಭಾರತದ ಅಭಿವೃದ್ಧಿ ಮತ್ತು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೇ 7ರಂದು ಕಮಲದ ಗುರುತಿಗೆ ಬಟನ್ ಒತ್ತಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿ ಮನವಿ ಮಾಡಿದರು.