ಕನ್ನಡಪ್ರಭ ವಾರ್ತೆ ಮಂಡ್ಯ

ಕ್ಷೇತ್ರದ ಅಭಿವೃದ್ಧಿ ಹರಿಕಾರ, ಶಾಸಕ ಪಿ.ರವಿಕುಮಾರ್ ವಿರುದ್ಧ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಮಾಡಿರುವ ಆರೋಪಗಳನ್ನು ಖಂಡಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಮೊದಲು ಸತ್ಯಾಸತ್ಯತೆ ಅರಿತು ಮಾತನಾಡಲಿ ಎಂದು ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶಾಸಕರು ದುಡಿಯುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಮಂಡ್ಯ ವಿಧಾನಸಭಾ ಕ್ಷೇತ್ರ ಹೇಗಿತ್ತು. ಪ್ರಸ್ತುತ ಹೇಗೆ ಅಭಿವೃದ್ಧಿಯಾಗಿದೆ ಎಂಬುದನ್ನು ನೋಡಲಿ ಎಂದು ಸಲಹೆ ನೀಡಿದರು.

ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ನೂರಾರು ಕೋಟಿ ರುಪಾಯಿ ಅನುದಾನ ತಂದು ನಗರ ಹಾಗೂ ಗ್ರಾಮೀಣ ಭಾಗದ ರಸ್ತೆ, ಚರಂಡಿ ಮತ್ತು ಕೆರೆ- ಕಟ್ಟೆಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. 224 ಕ್ಷೇತ್ರಗಳಿಗೆ ಹೋಲಿಸಿದರೆ ಮಂಡ್ಯ ಕ್ಷೇತ್ರ ಮಾದರಿಯಾಗಿದೆ ಎಂದು ಹೇಳಿದರು.

ನಿಮ್ಮ ನಾಯಕರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಜನ ಅವರ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಆದರೆ, ಅವರು ಮಂಡ್ಯ ಜಿಲ್ಲೆಗೆ ಯಾವುದೇ ಗುರುತರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನಿರುದ್ಯೋಗಿಗಳಿಗೆ ಒಂದು ಕಾರ್ಖಾನೆಯನ್ನೂ ತಂದಿಲ್ಲ. ಈ ಬಗ್ಗೆ ನಿಮ್ಮ ನಾಯಕರನ್ನು ಪ್ರಶ್ನಿಸಿ ಎಂದರು.


ತಮ್ಮ ಕೆಲಸಗಳಿಗೆ ಶಾಸಕರು ತಡೆಯೊಡ್ಡುತ್ತಿದ್ದಾರೆ ಎಂಬ ಆರೋಪ ಸುಳ್ಳು. ಜೆಡಿಎಎಸ್ ಬೆಂಬಲಿಗ ಗುತ್ತಿಗೆದಾರರಿಗೆ ಶಾಸಕರೇ ಕೆಲಸ ನೀಡಿದ್ದಾರೆ. ತಮ್ಮ ಕೆಲಸಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಹೇಳುವುದು ನಿಮಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಅವರಿಂದ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದರು.

ಅಭಿವೃದ್ಧಿ ಸಹಿಸದೆ ಆರೋಪ:

ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಮಾತನಾಡಿ, ಶಾಸಕ ಪಿ.ರವಿಕುಮಾರ್ ಅವರು ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಲಾಗದೆ ಹೊಟ್ಟೆ ಕಿಚ್ಚಿನಿಂದ ಬಿ.ಆರ್.ರಾಮಚಂದ್ರ ಆರೋಪ ಮಾಡುತ್ತಿದ್ದಾರೆ. ಜನಸಾಮಾನ್ಯರು ಮತ್ತು ಕಾರ್ಯಕರ್ತರ ನಡುವೆ ಕೆಲಸ ಮಾಡುತ್ತಿರುವ ಶಾಸಕರು ಮುಂದಿನ ಬಾರಿಯೂ ಗೆಲ್ಲುತ್ತಾರೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.

ಹಿರಿಯರಿಗೆ ಗೌರವ ಕೊಡುವುದು ಮತ್ತು ಅವರ ಕಾಲಿಗೆ ಬಿದ್ದು ನಮಸ್ಕರಿಸುವುದು ನಮ್ಮ ಸಂಸ್ಕೃತಿ. ಎಚ್.ಡಿ.ಕುಮಾರಸ್ವಾಮಿ ಅವರು ಹಿರಿಯರು ಹೀಗಾಗಿ ಶಾಸಕರು ಗೌರವ ಕೊಟ್ಟು ಕಾಲಿಗೆ ಬೀಳುತ್ತಾರೆಯೇ ಹೊರತು ಅವರಿಗೆ ಹೆದರಿ ಅಲ್ಲ. ನೀವು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಅಂದಾಭಿಮಾನಿಗಳಾಗಿದ್ದೀರಿ. ನೀವು ಮೇಲುಕೋಟೆ ಕ್ಷೇತ್ರದವರಾಗಿದ್ದು ಮಂಡ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ವಿಜಯ್ ಆನಂದ್‌ಗೆ ಟಿಕೆಟ್ ತಪ್ಪಿಸಿದ್ದು ಯಾರು?

ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಬೇಕಾಗಿತ್ತು. ಹಾಲು-ನೀರು ಹಗರಣದಲ್ಲಿ ಮಾಡಿದ ಹಣವನ್ನು ನಿಮ್ಮ ವರಿಷ್ಠರಿಗೆ ಕಪ್ಪ ಕಾಣಿಕೆ ನೀಡಿ ಬಿ ಫಾರಂ ತೆಗೆದುಕೊಂಡು ಮೋಸ ಮಾಡಿದ್ದೀರಿ ಎಂದು ಆರೋಪಿಸಿದರು.

ಸಿಮೆಂಟ್ ಏಜೆನ್ಸಿಯನ್ನು ಶಾಸಕ ರವಿಕುಮಾರ್ ಅವರ ಕುಮ್ಮಕ್ಕಿನಿಂದ ತಡೆಹಿಡಿಯಲಾಗಿದೆ ಎಂಬ ಆರೋಪ ಸರಿಯಲ್ಲ. ನೀವು ಮಾಡಿರುವ ತಪ್ಪಿನಿಂದ ನಿಮಗೆ ಏಜೆನ್ಸಿ ತಪ್ಪಿದೆಯೇ ವಿನಃ ಇದರಲ್ಲಿ ಶಾಸಕರ ಕೈವಾಡವಿಲ್ಲ. ಟೆಂಡರ್ ಪಡೆದಿರುವ ಕೆಲಸಗಳಿಗೂ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ನೀವು ಆರಂಭಿಸಿರುವ ಕೆಲಸಗಳೇ ಅರ್ಧಕ್ಕೆ ನಿಂತಿವೆ. ಮೊದಲು ಆ ಕಾಮಗಾರಿಗಳನ್ನು ಮುಗಿಸಿ ಆನ್‌ಲೈನ್ ಮೂಲಕವೇ ಟೆಂಡರ್ ನಡೆಯಲಿದೆ. ಇದರಲ್ಲಿ ಶಾಸಕರ ಪಾತ್ರವೇನು ಎಂದು ಪ್ರಶ್ನಿಸಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಂ.ರಾಮಕೃಷ್ಣ, ಯೋಗೇಶ್, ಪಿ.ಎನ್.ಸಿದ್ದೇಗೌಡ, ವಿ.ಗೀತಾ, ಚಂದ್ರಿಕಾ ಹಾಜರಿದ್ದರು.