ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೂಲ ಸ್ಥಾನದಲ್ಲಿ ಮೂಡಲ ಬಾಗಿಲ ಆಂಜನೇಯನ ಪ್ರತಿಷ್ಠಾಪನೆ ಹಿಂದೂಗಳ ಸಂಕಲ್ಪವಾಗಿದೆ. ಇಲ್ಲಿ ದೇವಸ್ಥಾನ ಇತ್ತು ಎಂಬ ಬಗ್ಗೆ ಕಣ್ಣಿಗೆ ಕಾಣುವ ಸಾಕಷ್ಟು ಕುರುಹುಗಳಿವೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.ಪಟ್ಟಣದ ಕ್ಷಣಾಂಭಿಕ, ಲಕ್ಷ್ಮೀದೇವಿ, ಆಂಜನೇಯ ಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಮುಚ್ಚಿ ಹೋಗಿತ್ತು. ಉತ್ಖನನದ ಬಳಿಕ ಸಾಕಷ್ಟು ಕುರುಹು ಸಿಕ್ಕಿತು. ಆದರೆ, ಶ್ರೀರಂಗಪಟ್ಟಣದಲ್ಲಿ ಉತ್ಖನನದ ಅವಶ್ಯಕತೆ ಇಲ್ಲ. ಕಣ್ಣಿಗೆ ಕಾಣುವ ಸಾಕಷ್ಟು ಕುರುಹುಗಳು ಸಿಗುತ್ತವೆ ಎಂದರು.
ಭಾರತದಲ್ಲಿರುವ ಮುಸ್ಲಿಮರಿಗೆ ನೆಮ್ಮದಿ, ಶಾಂತಿಯಿಂದಿರುವ ಮನಸ್ಥಿತಿ ಇಲ್ಲ. ನಾವು ಎಷ್ಟೇ ಅನ್ಯೋನ್ಯವಾಗಿದ್ದರೂ ಮುಸ್ಲಿಮರು ಗಣಪತಿ ಮೆರವಣಿಗೆ ಮೇಲೆ ಕಲ್ಲು ಹೊಡೆಯುತ್ತಾರೆ. ಮದ್ದೂರಿನಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು, ನಾಗಮಂಗದಲ್ಲಿ ಪೆಟ್ರೋಲ್ ಬಾಂಬ್ ಹಾಕಿದ್ದರು ಎಂದು ಹೇಳಿದರು.ದೇಶ ವಿಭಜನೆ ವೇಳೆ ಭಾರತದ ಕೊನೆಯ ಮುಸ್ಲಿಂ ಪಾಕಿಸ್ತಾನಕ್ಕೆ, ಪಾಕಿಸ್ತಾನದ ಕೊನೆಯ ಹಿಂದೂ ಭಾರತಕ್ಕೆ ಬರಲಿ ಎಂದು ಅಂಬೇಡ್ಕರ್ ಹೇಳಿದ್ದರು. ದಲಿತ ಮುಸ್ಲಿಂ ಭಾಯಿ- ಭಾಯಿ ಎನ್ನುವವರಿಗೆ ಅಂಬೇಡ್ಕರ್ ವಿಚಾರಧಾರೆ ಗೊತ್ತಿಲ್ಲ. ಅಲ್ಲದೆ ಅಂಬೇಡ್ಕರ್ ಅವರಿಗೆ ಆತ್ಮಸಾಕ್ಷಿಯಿಂದ ಸಂವಿಧಾನ ಬರೆಯಲು ಸಹಕಾರ ಕೊಟ್ಟಿಲ್ಲ. ಅಲ್ಲದೆ ಆರ್ಟಿಕಲ್ 370 ತೆಗೆಯುವ ಮುನ್ನ ಕಾಶ್ಮೀರದಲ್ಲಿ ರಿಸರ್ವೇಶನ್ ಇರಲಿಲ್ಲ. ಅಲ್ಲಿನ ದಲಿತರು ಡೀಸಿ ಆಗುತ್ತಿರಲಿಲ್ಲ. ಬದಲಿಗೆ ಕೇವಲ ಪೌರಕಾರ್ಮಿಕ ಆಗಲಷ್ಟೇ ಅವಕಾಶ ಇತ್ತು. ಆದರೆ, ನರೇಂದ್ರ ಮೋದಿಯವರು ಆರ್ಟಿಕಲ್ 370 ತೆಗೆಯುವ ಮೂಲಕ ಅಂಬೇಡ್ಕರ್ ವಿಚಾರಧಾರೆ ಎತ್ತಿಹಿಡಿದಿದ್ದಾರೆ. ಈಗ ಅಲ್ಲಿಯವರು ಡೀಸಿಯೂ ಆಗುತ್ತಾರೆ. ಶಾಸಕರು ಆಗುತ್ತಾರೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಕುರಿತು ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಎಲ್ಲಿಯೂ ಸಹ ಗಲಾಟೆ ಆಗಿಲ್ಲ. ಹಿಂದೂಗಳ ಸಹಿಷ್ಣುತೆಯಿಂದಲೇ ಅವರೆಲ್ಲಾ ಜೀವಂತವಿದ್ದಾರೆ. ಹಿಂದೂಗಳು- ಆರ್‌ಎಸ್‌ಎಸ್ ದೇಶ ಕೂಡಿಸುವ ಕೆಲಸ ಮಾಡಿದೆ ಎಂದರು.
ಮತ ಬ್ಯಾಂಕಿನ ಸಲುವಾಗಿ ಕಾಂಗ್ರೆಸ್‌ನಿಂದ ಹಿಂದೂ- ಮುಸ್ಲಿಂ ಗಲಾಟೆ ಮಾಡಿಸಿದೆ. ಕಾಂಗ್ರೆಸ್ ಸರ್ಕಾರ ಇದ್ದ ಕಡೆ ಮಾತ್ರ ಹಿಂದೂ- ಮುಸ್ಲಿಂ ಗಲಾಟೆ ಯಾಕೆ? ಅದೇ ಗುಜರಾತ್‌ನಲ್ಲಿ ಯಾಕಿಲ್ಲ. ಕರ್ನಾಟಕದಲ್ಲಿ ಮಾತ್ರ ಗಲಾಟೆ. ಬಾಂಗ್ಲಾ, ಕೇರಳದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಸ್ಮರಣೆ ಮಾಡದಿದ್ದರೆ ಮಲಗಲ್ಲ. ಖರ್ಗೆ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗಿದೆ. ನಾಳೆಯಿಂದ ಗೃಹಮಂತ್ರಿ ಜಾಮೀನು ಪಡೆದು ಓಡಾಡಬೇಕಾಗುತ್ತದೆ. 2028ಕ್ಕೆ ತನ್ನನ್ನು ಸಿಎಂ ಅಭ್ಯರ್ಥಿ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ಗೆ ಬೈಯ್ಯುತ್ತಾರೆ. ಪ್ರಿಯಾಂಕ್ ಖರ್ಗೆ ನರೇಂದ್ರ ಮೋದಿಯವರ ಕಾಲಿನ ಧೂಳಾಗಲ್ಲ. ಆಕಾಶಕ್ಕೆ ಉಗಿದು ತಮ್ಮ ಮುಖದ ಮೇಲೆ ಬೀಳಿಸಿಕೊಳ್ಳುವ ಪ್ರವೃತ್ತಿ. ನರೇಂದ್ರ ಮೋದಿಗೆ ಬೈಯ್ದರೆ ರಾಹುಲ್ ಗಾಂಧಿಗೆ ಸಂತೋಷ. ವಿಘ್ನ ಸಂತೋಷಿ, ರಾಹುಲ್ ಗಾಂಧಿ ಮನಸ್ಥಿತಿ ಎಂದು ಕಿಡಿಕಾರಿದರು.ಈಗೀನ ಬಿಜೆಪಿ ರಾಜ್ಯದಲ್ಲಿ ವಿಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ದೊಡ್ಡ ಆಂದೋಲನ ಪ್ರಾರಂಭವಾದ ಮೇಲೆ ಬಿಡದಿ ಹೋರಾಟಕ್ಕೆ ಬಿಜೆಪಿ ನಾಯಕರು ಹೋಗಿದ್ದಾರೆ. ವಿಜಯೇಂದ್ರ ಕೆಳಗಿಳಿಸುವ ಆಂದೋಲನ ಈಗ ಪ್ರಾರಂಭವಾಗಿದೆ. ಎಲ್ಲಾ ಆಂದೋಲನಗಳು ಪ್ರಾರಂಭದಲ್ಲೇ ಫಲ ಕೊಡಲ್ಲ. ಯಡಿಯೂರಪ್ಪರನ್ನು ಕೆಳಗಿಳಿಸುತ್ತೇವೆ ಎಂದು ಹೇಳಿದ್ದೇವು ಇಳಿಸಿದ್ದೇವೆ ಎಂದರು.
ಆಷಾಢ ಶುಕ್ರವಾರ ಅಂಗವಾಗಿ ಶ್ರೀ ಚಾಮುಂಡಿ ತಾಯಿ ದರ್ಶನ ಪಡೆದು ರಾಜ್ಯಕ್ಕೆ ಒಳ್ಳೆಯದಾಗಲಿ. ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿದ್ದೇನೆ. ನಾಯಕತ್ವ ಬದಲಾದ ಬಳಿಕ ಬಿಜೆಪಿ ಸೇರ್ಪಡೆ ಅಥವಾ ಹೊಸ ಪಕ್ಷ ವಿಚಾರ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಸೀದಿಗೆ ಭದ್ರತೆ:ಶಾಸಕ ಬಸವನಗೌಡ ಯತ್ನಾಳ್ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ಜಾಮೀಯಾ ಮಸೀದಿ ಸುತ್ತಲೂ ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ವೇಳೆ ಹಿಂದೂ ಸಂಘಟನೆ ಮುಖಂಡ ಬಿ.ಎಸ್.ಪಾಟೀಲ್, ಬಜರಂಗ ದಳದ ರಾಜ್ಯಾಧ್ಯಕ್ಷ ಮಂಜುನಾಥ್, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಚಂದನ್ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಇದ್ದರು.