ಜಿಲ್ಲೆಯಲ್ಲಿ ಅಕ್ರಮ ತಡೆಯಲು ಹೋದರೆ, ಅಟ್ರಾಸಿಟಿ ಕೇಸುಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಭಾವಿಗಳು ಜಾತಿನಿಂದನೆ ಕೇಸ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಜಿಲ್ಲೆಯಲ್ಲಿ ಅಕ್ರಮ ತಡೆಯಲು ಹೋದರೆ, ಅಟ್ರಾಸಿಟಿ ಕೇಸುಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಭಾವಿಗಳು ಜಾತಿನಿಂದನೆ ಕೇಸ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಆರೋಪಿಸಿದರು.

ತಾಲೂಕು ಬಿಜೆಪಿಯಿಂದ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ದಾವಣಗೆರೆ ಉತ್ತರ ಕ್ಷೇತ್ರ ಕಾಡಜ್ಜಿ ಗ್ರಾಮದ ಕೃಷಿ ಸಂಶೋಧನಾ ಕೇಂದ್ರಕ್ಕೆ ಶಾಸಕ ಬಿ.ಪಿ.ಹರೀಶ್ ತೆರಳಿದ ಸಂದರ್ಭದಲ್ಲಿ. ಕೃಷಿ ಇಲಾಖೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಾಣಿಕೆ ಮಾಡುವುದನ್ನು ಗಮನಿಸಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಕರೆಸಿಕೊಂಡು ಅಕ್ರಮ ತಡೆದಿರುವ ಪರಿಣಾಮ ಅವರ ಮೇಲೆ ಅಟ್ರಾಸಿಟಿ ಕೇಸನ್ನು ದಾಖಲು ಮಾಡಿರುವುದು ಖಂಡನೀಯ ಎಂದರು.

ಅಕ್ರಮ ಮಣ್ಣು ಸಾಗಾಣಿಕೆ ಮಾಡುವರ ವಿರುದ್ಧ ದೂರು ದಾಖಲಾಗಿ ಎರಡು ದಿನಗಳ ನಂತರ ಶಾಸಕ ಹರೀಶ್ ಅವರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಿರುವುದು ಹಲವು ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವಿಗಳ ಕುಮ್ಮಕ್ಕಿನಿಂದ ಆಗಿದೆ. ನಿಜವಾಗಿಯೂ ಜಾತಿ ನಿಂದನೆ ಆಗಿದ್ದರೆ ತನಿಖೆ ನಡೆಸಲಿ ಅದು ಬಿಟ್ಟು ಜಿಲ್ಲಾಧಿಕಾರಿ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಪಕ್ಷಪಾತಿಯಾಗಿ ಕಾರ್ಯ ನಿರ್ವಹಿಸಬಾರದು ಎಂದರು.

ಕಾಂಗ್ರೆಸ್ ಪಕ್ಷದವರಿಗೆ ಅಧಿಕಾರದ ಮದ ಏರಿದೆ. ಇವರಿಗೆ ಸಂವಿಧಾನಕ್ಕೆ ಮತ್ತು ಕಾನೂನಿಗೆ ಗೌರವ ಇಲ್ಲ. ಇತ್ತೀಚಿಗೆ ಬಳ್ಳಾರಿಯಲಿ ನಡೆದ ಘಟನೆ ಮತ್ತು ಶಿಡ್ಲಘಟ್ಟ ಅಧಿಕಾರಿ ಮೇಲೆ ನಡೆದ ದೌರ್ಜನ್ಯ ಸಾಕ್ಷಿಯಾಗಿವೆ. ರಾಜ್ಯದಲ್ಲಿ ಇದೇ ರೀತಿ ಅನೇಕ ದಬ್ಬಾಳಿಕೆಗಳು ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿವೆ. ಆದರೆ ಶಕ್ತಿ ಇದ್ದವರು, ಮಾತ್ರ ಇದನ್ನ ಎದುರಿಸುತ್ತಿದ್ದಾರೆ ಎಂದರು.

ಸ್ವಪಕ್ಷೀಯರೇ ಹರೀಶ್ ಅವರ ವಿರುದ್ಧ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುತ್ತಿರುವ ಬಿಜೆಪಿ ಪಕ್ಷದವರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿಸುವ ಕೆಲಸವನ್ನು ಜಿಲ್ಲಾ ಮಂತ್ರಿಗಳು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರ ವಿರುದ್ಧ ಬಿಜೆಪಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮಾಂತರ ಘಟಕ ಅಧ್ಯಕ್ಷ ಎಂ.ಪಿ.ಲಿಂಗರಾಜ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಇಟ್ಟಿಗೆ ಭಟ್ಟಿಗಳಿಗೆ ಮಣ್ಣು ಅಗೆಯಬೇಕೆಂದಾಗ ಸರ್ಕಾರದ ರಾಯಲ್ಟಿ ಕಟ್ಟಿ ಕಾನೂನು ಬದ್ಧವಾಗಿ ತೆಗೆಯುವಂತೆ ತಹಸೀಲ್ದಾರ್ ಸಮ್ಮುಖದಲ್ಲಿ ಶಾಸಕರು ಸಮ್ಮತಿ ನೀಡಿದ್ದರು. ತಪ್ಪು ಯಾರು ಮಾಡಿದ್ರು ತಪ್ಪೇ ಈ ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮ ತಡೆಯುವುದೇ ತಪ್ಪು ಎಂಬಂತಾಗಿದೆ ಎಂದರು.

ನಗರಸಭೆ ಮಾಜಿ ಸದಸ್ಯ ಆಟೋ ಹನುಮಂತಪ್ಪ, ನಗರ ಘಟಕ ಅಧ್ಯಕ್ಷ ಅಜೀತ್ ಸಾವಂತ್, ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ಮಂಜನಾಯ್ಕ್ ಹೆಚ್, ವೀರೇಶ್ ಆದಾಪುರ, ನಗರಸಭಾ ಸದಸ್ಯರಾದ ಮಾಜಿ ಸದಸ್ಯರಾದ ಅಶ್ವಿನಿ ಕೃಷ್ಣ, ಎಸ್ಸಿ ಮೋರ್ಚಾ ಅಧ್ಯಕ್ಷ ಸಂತೋಷ ಗುಡಿಮನಿ, ಕೆ.ಎನ್.ಹಳ್ಳಿ ಮಹಾಂತೇಶ್ ಮತ್ತಿತರು ಇದ್ದರು.