ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಬೈಲೂರು ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದ ಆರೋಪಗಳು ಸುಳ್ಳು ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಕಾರ್ಕಳದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಹತಾಶ ಪ್ರಯತ್ನಗಳೆಲ್ಲಾ ವಿಫಲವಾಗಿವೆ ಎಂದು ತಿರುಗೇಟು ನೀಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಪಕ್ಷಗಳ ವಿರುದ್ಧ ನಿರಂತರವಾಗಿ ತನಿಖೆಗಳನ್ನು ನಡೆಸುವ ಪ್ರವೃತ್ತಿ ಬೆಳವಣಿಗೆಯಾಗಿದೆ. ಫೈಬರ್ ಪ್ರತಿಮೆ ಎಂಬಂತೆ ಕಪೋಲಕಲ್ಪಿತ ಕಥೆಗಳ ಮೂಲಕ ಅಪಪ್ರಚಾರ ನಡೆಸಿದ್ದು, ಈಗ ಅದು ಸುಳ್ಳೆಂಬುದು ಬಯಲಾಗಿದೆ ಎಂದು ಅವರು ಖಂಡಿಸಿದರು.ಪರಶುರಾಮ ಥೀಂ ಪಾರ್ಕ್ ನನ್ನ ಕನಸಿನ ಯೋಜನೆ ಆಗಿದ್ದು, ಇದನ್ನು ದಕ್ಷಿಣ ಭಾರತದ ಶ್ರೇಷ್ಠ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಗುರಿ ಇತ್ತು. ಆದರೆ, ಕಾಂಗ್ರೆಸ್ ನಾಯಕರ ಅಸೂಯೆ ಮತ್ತು ರಾಜಕೀಯ ಲಾಭಕ್ಕಾಗಿ ಈ ಯೋಜನೆಗೆ ಅಡ್ಡಿಯಾದರು. ಪ್ರತಿಮೆ ಫೈಬರ್‌ನದು ಎಂಬ ತಪ್ಪು ಮಾಹಿತಿ ಹರಡಿದ ಕಾಂಗ್ರೆಸ್ ನಾಯಕರು ಈಗ ಸಾರ್ವಜನಿಕರಿಗೆ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಪ್ರಾರಂಭದಿಂದಲೂ ಪರಶುರಾಮ ಪ್ರತಿಮೆಯ ನಿರ್ಮಾಣ ಸಂಬಂಧ ಯಾರಾದರೂ ದೋಷಿಯಾಗಿದ್ದರೆ ತನಿಖೆ ನಡೆಸಿ, ಆದರೆ ಕಳಪೆ ಪ್ರಚಾರ ಬೇಡವೆಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಆದರೆ ಈ ವಿಷಯವನ್ನು ಮುಂದಿನ ಚುನಾವಣೆಯವರೆಗೆ ಜೀವಂತವಿಡುವಂತೆ ಉಪಮುಖ್ಯಮಂತ್ರಿ ಹೇಳಿದ್ದರ ಅರ್ಥವೇನು? ಎಂಬುದಾಗಿ ಅವರು ಪ್ರಶ್ನಿಸಿದರು.ಇದು ನನ್ನ ವಿರುದ್ಧವಷ್ಟೇ ಅಲ್ಲ, ಬಿಜೆಪಿ ವಿರುದ್ಧ ರೂಪಿಸಲಾದ ಷಡ್ಯಂತ್ರವೆಂದೂ ಅವರು ಬಿಂಬಿಸಿದರು. ಅಂತಿಮವಾಗಿ, ಸರ್ಕಾರ ಈ ಥೀಂ ಪಾರ್ಕ್ ಅಭಿವೃದ್ಧಿಗೆ ಸಹಕರಿಸಲು ಮನಸ್ಸಿಲ್ಲದಿದ್ದರೆ, ಭಿಕ್ಷೆ ಬೇಡಿಕೆಯಿಂದಾದರೂ ಇದನ್ನು ಅಭಿವೃದ್ಧಿಪಡಿಸಲು ನಾನು ಸಿದ್ಧನಿದ್ದೇನೆ ಎಂದು ವಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.