ಸಾರಾಂಶ
ಬೆಂಗಳೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ತಾನು ಗೆಲ್ಲಬಹುದಾದ ಏಳು ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಡ್ ಅಭ್ಯರ್ಥಿ ಹೆಸರನ್ನು ಅಖೈರುಗೊಳಿಸಿದ್ದು, ಶನಿವಾರ ಸಂಜೆ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮೂಲಗಳ ಪ್ರಕಾರ ಕಡೆ ಕ್ಷಣದವರೆಗೂ ತೂಗುಯ್ಯಾಲೆಯಲ್ಲಿದ್ದ ಸಚಿವ ಎನ್.ಎಸ್. ಬೋಸರಾಜು ಹಾಗೂ ಕೆ. ಗೋವಿಂದರಾಜು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ನಾಯಕತ್ವವು ನೀಡಿದ್ದ 20 ಮಂದಿಯ ಹೆಸರಿದ್ದ ಪಟ್ಟಿಯನ್ನು ಹೈಕಮಾಂಡ್‌ನ ವರಿಷ್ಠರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪರಿಷ್ಕರಿಸಿದ್ದು, ಜೂ.13ಕ್ಕೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿರುವ ಏಳು ಸ್ಥಾನ ಮತ್ತು ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನ ಸೇರಿ ಒಟ್ಟು ಎಂಟು ಸ್ಥಾನಗಳಿಗೆ ಹೆಸರು ಅಖೈರುಗೊಳಿಸಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಸ್ಥಾನವನ್ನು ಉತ್ತರ ಕರ್ನಾಟಕದ ಪಂಚಮಸಾಲಿ ಸಮುದಾಯಕ್ಕೆ ನೀಡಲು ತೀರ್ಮಾನವಾಗಿದ್ದು, ಆ ಅಭ್ಯರ್ಥಿ ಯಾರು ಎಂಬುದನ್ನು ಖರ್ಗೆ ನಿರ್ಧರಿಸಲಿದ್ದಾರೆ.
ಅದರಂತೆ ಒಬಿಸಿ ಕೋಟಾದಡಿ ಯತೀಂದ್ರ ಸಿದ್ದರಾಮಯ್ಯ ಮತ್ತು ಸಚಿವ ಬೋಸರಾಜು, ಪರಿಶಿಷ್ಟ ಜಾತಿ ಕೋಟಾದಲ್ಲಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಪರಿಶಿಷ್ಟ ಪಂಗಡದಿಂದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಒಕ್ಕಲಿಗ ಕೋಟಾದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಸ್ಲಿಂ ಕೋಟಾದಲ್ಲಿ ಇಸ್ಮಾಯಿಲ್ ತಮಟಗಾರ, ಕ್ರಿಶ್ಚಿಯನ್ ಕೋಟಾದಲ್ಲಿ ಐವನ್ ಡಿಸೋಜಾ ಅವರ ಹೆಸರು ಅಂತಿಮಗೊಂಡಿದೆ.
ಯುವ ಸಚಿವರ ಪ್ರಬಲ ಲಾಬಿ:
ಒಬಿಸಿ ಕೋಟಾದಡಿ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರನ್ನು ಮೊದಲೇ ತೀರ್ಮಾನಗೊಳಿಸಲಾಗಿತ್ತು. ಬೋಸರಾಜು ಅವರ ಆಯ್ಕೆ ಅನುಮಾನವಾಗಿತ್ತು. ಬೋಸರಾಜು ಅವರ ಪುತ್ರ ರವಿ ಬೋಸರಾಜು ಹಾಗೂ ಅವರಿಗೆ ಸಾಥ್ ನೀಡಿದ ಯುವ ಸಚಿವರ ಪಡೆಯ ಪ್ರಬಲ ಲಾಬಿಯ ಪರಿಣಾಮವಾಗಿ ಬೋಸರಾಜು ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.
ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಅಜಯಸಿಂಗ್ ಹಾಗೂ ರವಿ ಬೋಸರಾಜು ಸೇರಿದಂತೆ ಇನ್ನು ಹಲವು ಯುವ ಸಚಿವರು ಹಾಗೂ ಮುಖಂಡರು ಬೋಸರಾಜು ಅವರ ಪರವಾಗಿ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಪ್ರಭಾವ ಬೀರಿದ್ದರಿಂದ ಅವರಿಗೂ ಟಿಕೆಟ್ ದೊರಕಿದೆ.
ಬೋಸರಾಜು ಅವರು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಡ ಹಾಕಿದ್ದರು. ಇದೇ ಮಾನದಂಡದ ಮೇಲೆ ಮುಖ್ಯಮಂತ್ರಿ ಅವರ ಪ್ರಭಾವದ ಮೇಲೆ ಗೋವಿಂದರಾಜು ಅವರಿಗೂ ಟಿಕೆಟ್ ಖಚಿತಗೊಂಡಿದೆ ಎಂದು ಮೂಲಗಳು ಹೇಳಿವೆ.
ಇನ್ನು ವಿಧಾನಪರಿಷತ್ತಿನಲ್ಲಿ ಪ್ರಬಲವಾಗಿ ಪಕ್ಷ ನಿಲುವು ಮಂಡಿಸುವವರು ಬೇಕು ಎಂಬ ವಾದದಿಂದಾಗಿ ಪರಿಶಿಷ್ಟ ಪಂಗಡ ಕೋಟಾ ಅಡಿ ವಿ.ಎಸ್. ಉಗ್ರಪ್ಪ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾದಲ್ಲಿ ಮಹಿಳಾ ಕೋಟಕ್ಕೆ ಕತ್ತರಿ ಬೀಳಬಹುದು ಎನ್ನಲಾಗಿದೆ.
ಸಂಭಾವ್ಯರುಯತೀಂದ್ರ ಸಿದ್ದರಾಮಯ್ಯಒಬಿಸಿಬೋಸರಾಜುಒಬಿಸಿವಸಂತ್ ಕುಮಾರ್‌ಎಸ್‌ಸಿವಿ.ಎಸ್.ಉಗ್ರಪ್ಪಎಸ್‌ಟಿಗೋವಿಂದರಾಜುಒಕ್ಕಲಿಗಇಸ್ಮಾಯಿಲ್ ತಮಟಗಾರಮುಸ್ಲಿಂಐವನ್ ಡಿಸೋಜಾಕ್ರಿಶ್ಚಿಯನ್