ಏಳು ಎಂಎಲ್ಎ, ಓರ್ವ ಸಚಿವರಿದ್ದರೂ ಸೋತ ಕಾಂಗ್ರೆಸ್

| Published : Jun 06 2024, 12:30 AM IST

ಸಾರಾಂಶ

ಲೀಡರ್ಸ್ ಇಲ್ಲದಿದ್ದರೂ ಗೆದ್ದ ಬಿಜೆಪಿ । ಕನಸಲ್ಲೂ ಸೋಲಿನ ಚೆಕ್ಕಾಚಾರ ಮಾಡಿಕೊಂಡಿರಲಿಲ್ಲ ಕಾಂಗ್ರೆಸ್

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಏಳು ಜನ ಎಂಎಲ್ಎ, ಓರ್ವ ಸಚಿವ, ಸಾಲದೆಂಬಂತೆ ಮೂರು ನಿಗಮ ಮಂಡಳಿ ಅಧ್ಯಕ್ಷರಿದ್ದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ.

ಜಿಲ್ಲೆಯಲ್ಲಿ ಹೊಳಲ್ಕೆರೆ ಬಿಟ್ಟರೆ ಬೇರೆಡೆ ಶಾಸಕ ಸ್ಥಾನ ಹೊಂದಿರದ ಬಿಜೆಪಿ. ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಪಾವಗಡ ಹಾಗೂ ಶಿರಾದಲ್ಲಿ ನಾಯಕರೆ ಇಲ್ಲ. ಆದರೂ ಬಿಜೆಪಿ ನಿರಾಯಾಸವಾಗಿ ಗೆದ್ದಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದು ಚಿತ್ರದುರ್ಗ ಕ್ಷೇತ್ರದ ಸೋಲು- ಗೆಲುವಿನ ಕುರಿತು ನಡೆಯುತ್ತಿರುವ ಚರ್ಚೆಯ ಹಿಂದಿರುವ ಮೂಲ ತಿರುಳು.

ಕಾಂಗ್ರೆಸ್‌ನಲ್ಲಂತೂ ಚಿತ್ರದುರ್ಗದ ಸೋಲನ್ನು ಅರಗಿಸಿಕೊಳ್ಳಲಿಕೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್‌ಗೆ ಮೊಳಕಾಲ್ಮೂರಿನಲ್ಲಿ 26 ಸಾವಿರ ಲೀಡ್ ಬಾರದಿದ್ದರೆ ಪರಿಸ್ಥಿತಿ ಇನ್ನಷ್ಟೂ ಭೀಕರವಾಗಿರುತ್ತಿತ್ತು ಎನ್ನತ್ತಾರೆ ಕೆಲ ಹಿರಿಯ ನಾಯಕರು.

ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಫೀಲ್ಡ್ ವರ್ಕ್ ಮಾಡದೆ, ಬರೀ ಪ್ರೆಸ್‌ ಮೀಟ್‌ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಗಳಲ್ಲಿ ಪಾಲ್ಗೊಂಡಿದ್ದೆ ಹೆಚ್ಚು. ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು ಕೊಟ್ಟಿದ್ದು, ಅವರು ಕಾಂಗ್ರೆಸ್‌ ಬಿಟ್ಟು ಬರೆಡೆ ಮತ ಹಾಕಲಾರರು ಎಂಬ ವಿಶ್ವಾಸದೊಂದಿಗೆ ಅಲೆದಾಡಿದ ನಾಯಕರು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಕಷ್ಟ ಅರ್ಥ ಮಾಡಿಕೊಳ್ಳಲೇ ಇಲ್ಲ ಎಂದು ಕೆಲ ಹಿರಿಯ ನಾಯಕರು ಅಭ್ರಪಾಯ ವ್ಯಕ್ತಪಡಿಸುತ್ತಿದ್ದಾರೆ.

ಹಾಗೆ ನೋಡಿದರೆ ಕಾಂಗ್ರೆಸ್‌ ಲೋಕಸಭೆ ಚುನಾವಣೆಗೆ ಭರ್ಜರಿ ಪೂರ್ವ ತಯಾರಿ ನಡೆಸಿತ್ತು. ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ಆಯೋಜನೆ ಮಾಡಿ, ಹಿಂದುಳಿದ, ಪರಿಶಿಷ್ಟ ಸಮುದಾಯಗಳು ಹೆಚ್ಚು ಪಾಲ್ಗೊಳ್ಳುವಂತೆ ನೋಡಿಕೊಂಡಿತ್ತು. ಅಲ್ಲದೇ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರಸ್‌ನ ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿ ಹಲವರು ಬಂದು ಭಾಷಣ ಮಾಡಿ ಹೋಗಿದ್ದರು. ಆದರೆ ಇಲ್ಲಿ ಯಾವುದು ಕೂಡ ವರ್ಕ್ಔಟ್ ಆಗಲೇ ಇಲ್ಲ. ಹಿರಿಯೂರಿನಲ್ಲಂತೂ ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಪತಿ ಶ್ರೀನಿವಾಸ್, ಸಚಿವ ಡಿ.ಸುಧಾಕರ್ ಇದ್ದರೂ ಸಹಿತ ಬಿಜೆಪಿಗೆ ಲೀಡ್ ಬಂದಿದೆ.

ಒಕ್ಕಲಿಗರು, ಯಾದವರು ಹಾಗೂ ಪರಿಶಿಷ್ಟ ಪಂಗಡದ ಎಡಗೈ ಸಮುದಾಯದ ಜನಾಂಗ ಬಿಜೆಪಿಗೆ ಬೆಂಬಲಿಸಿದ್ದಾರೆ.

ಮೊಳಕಾಲ್ಮೂರಿನಲ್ಲಿ ಬಿಜೆಪಿ ವೀಕ್ ಇದ್ದ ಕಾರಣ ಕಾಂಗ್ರೆಸ್ ಅಲ್ಲಿ ಲೀಡ್ ಪಡೆಯಿತು. ಆದರೆ ಚಿತ್ರದುರ್ಗದಲ್ಲಿ ಬಿಜೆಪಿ 18 ಸಾವಿರ ಮತಗಳು ಲೀಡ್ ಪಡೆದದ್ದಂತೂ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸ್ಥಳೀಯ ಶಾಸಕರು ಮತದಾನಕ್ಕೆ ಮೂರು ದಿನವಿರುವಾಗ ಫೀಲ್ಡ್ ಗೆ ಇಳಿದಿದ್ದರು. ಕಾಂಗ್ರೆಸ್ ಹೈಕಮಾಂಡ್ ಕೂಡಾ ಚಿತ್ರದುರ್ಗ ಶಾಸಕರಿಗೆ ಬಿಗಿ ನಿರ್ದೇಶನ ನೀಡಲಿಲ್ಲ. ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ನಿರ್ಣಾಯಕ ಚುನಾವಣೆಗಳಲ್ಲಿ ಶಾಸಕರು ಈ ರೀತಿಯಾಗಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಕ್ಕೆ ಜಿಲ್ಲಾ ಮಟ್ಟದ ಹಿರಿಯ ನಾಯಕರು ತೀವ್ರ ಅಸಮದಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್‌ ಪರಿಸ್ಥಿತಿಯಾದರೆ ಒಂದೆಡೆಯಾದರೆ ಬಿಜೆಪಿಯದ್ದೂ ಇದಕ್ಕಿಂತ ವಿಭಿನ್ನವಾದುದ್ದು, ಬಿಜಿಪಿಗೆ ಹೊಳಲ್ಕೆರೆ ಬಿಟ್ಟರೆ ಬೇರೆ ಯಾವ ಕ್ಷೇತ್ರಗಳಲ್ಲಿ ಶಾಸಕರಿಲ್ಲ. ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ, ಬಸವರಾಜನ್ ತುಸು ಕ್ಷೇತ್ರ ಸುತ್ತಿದರು ಎಂಬುದ ಹೊರತು ಪಡಿಸಿ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಸಾಥ್ ಸಿಗಲೇ ಇಲ್ಲ. ಹೊಸದುರ್ಗ, ಹಿರಿಯೂರು, ಶಿರಾ ಪಾವಗಡ, ಚಳ್ಳಕೆರೆಯಲ್ಲಿ ಬಿಜೆಪಿ ಲೀಡರ್ ಗಳೂ ಚುನಾವಣೆ ನೇತೃತ್ವ ವಹಿಸಲಿಲ್ಲ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಶಿರಾ, ಪಾವಗಡದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿದ ಪರಿಣಾಮ ಗೆಲವು ಸಾಧ್ಯವಾಗಿದೆ. ಅದರಲ್ಲಿ ಒಕ್ಕಲಿಗ ಸಮುದಾಯ ಬಿಜೆಪಿ ಪರವಾಗಿ ಇತ್ತೆಂಬುದು ಚುನಾವಣೆ ಸಾಬೀತು ಪಡಿಸಿದೆ.

ಚುನಾವಣೆ ವೇಳೆ ಯಾರ್ಯಾರು ಕೈ ಹಿಡಿದರು ಮತ್ತು ಯಾರ್ಯಾರು ಕೈ ಚೆಲ್ಲಿದರು ಎಂಬ ಕುರಿತು ಒದು ಪಟ್ಟಿಯೇ ಗೋವಿಂದ ಕಾರಜೋಳರ ಬಳಿ ಇದೆ. ಮತದಾನವಾದ ನಂತರ ನಡೆದ ಆತ್ಮಾವಲೋಕನ ಸಭೆಯಲ್ಲಿ ಗೋವಿಂದ ಕಾರಜೋಳ ಸೂಕ್ಷ್ಮವಾಗಿ ಎಲ್ಲರ ತರಾಟೆಗೆ ತೆಗೆದುಕೊಂಡಿದ್ದರು.

ಕಾಂಗ್ರೆಸ್ ನಾಯಕರು ಚುನಾವಣೆಯನ್ನು ಗಂಭಿರವಾಗಿ ತೆಗೆದುಕೊಳ್ಳಲಿಲ್ಲ. ಬಿಜೆಪಿಯಲ್ಲಿರುವ ನಾಯಕರು ಅಸಹಕಾರ ಚಳವಳಿ ಘೋಷಿಸಿದ್ದರು. ಹಾಗಾಗಿ ಮತದಾರ ತನ್ನಷ್ಟಕ್ಕೆ ತಾನು ಕೈಗೊಂಡ ನಿಲುವು ಇದಾಗಿದೆ.

ಕಾಂಗ್ರೆಸ್ ಶೋಷಿತ ಸಮಾವೇಶ ಮಾಡಿ ಧಣಿದು ಮನೆಯಲ್ಲಿ ಕುಳಿತರೆ, ಲಿಂಗಾಯಿತರು, ಒಕ್ಕಲಿಗರು, ಯಾದವರು ಗೋವಿಂದ ಕಾರಜೋಳರನ್ನುಸಂಸತ್ ಗೆ ಕಳಿಸಿದೆ ಎಂಬ ಮಾತುಗಳು ಕೇಳಿಬಂದಿವೆ.