ಕಾಂಗ್ರೆಸ್ ಗುಂಪುಗಾರಿಕೆಯಿಂದಾಗಿ ಸೋತೆ

| Published : Oct 25 2025, 01:00 AM IST

ಸಾರಾಂಶ

ಕೋಲಾರ ಜಿಲ್ಲೆಯಲ್ಲಿ ಕೆ.ಹೆಚ್.ಮುನಿಯಪ್ಪ ಮತ್ತು ಕೆ.ಆರ್.ರಮೇಶ್ ಕುಮಾರ್ ಹಿರಿಯರಾಗಿದ್ದು ಅವರ ಮನವೊಲಿಸಿ ೨ ಗುಂಪುಗಳನ್ನು ಒಂದು ಮಾಡಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್‌ ಪ್ರಯತ್ನಿಸಲಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅಭಿಷೇಕ್ ದತ್ ಭಾನುವಾರ ಮುಳಬಾಗಿಲುಗೆ ಬರುತ್ತಿದ್ದು ಇಲ್ಲಿಂದ ಎನ್‌ಡಿಎ ಮೋಸದ ಕುರಿತು ಸಹಿ ಸಂಗ್ರಹ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮುಳಬಾಗಿಲು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹೈಕಮಾಂಡ್ ತಮಗೆ ನೀಡುವುದಕ್ಕೆ ಮುಂಚೆಯೇ ಪಕ್ಷದಲ್ಲಿ ಸಚಿವ ಕೆ.ಎಚ್.ಮುನಿಯಪ್ಪರವರ ಅಳಿಯ ಮತ್ತು ಮಾಜಿ ಸ್ವೀಕರ್ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರ ಗುಂಪುಗಾರಿಕೆ ಇತ್ತು. ಇದರಿಂದಲೇ ತಾವು ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್ ತಿಳಿಸಿದರು.ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿಯಾದ ನಂತರ ಮೊದಲ ಬಾರಿಗೆ ಮುಳಬಾಗಿಲಿಗೆ ಆಗಮಿಸಿದ ಅವರನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿದರು. ಬಳಿಕ ಮಾತನಾ ಮಾತನಾಡಿ, ಕೇವಲ ೧೮ ದಿನಗಳು ಮಾತ್ರ ಚುನಾವಣೆ ಎದುರಿಸಲು ನನಗೆ ಕಾಲಾವಕಾಶ ಸಿಕ್ಕಿತ್ತು. ಜೊತೆಗೆ ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕೋಮುವಾದದ ವಿಷ ಬೀಜ ಬಿತ್ತಿ ಕುತಂತ್ರಗಳನ್ನು ಮಾಡಿದ್ದರಿಂದ ತಾವು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದರು. ಮುಂದಿನ ಬಾರಿಯೂ ಸ್ಪರ್ಧೆ

೬ ಲಕ್ಷ ೨೫ ಸಾವಿರ ಮತಗಳನ್ನು ಕೋಲಾರ ಲೋಕಸಭಾ ಕ್ಷೇತ್ರದ ಜನತೆ ನನಗೆ ನೀಡಿದ್ದಾರೆ ಕೇವಲ ೬೦ ಸಾವಿರ ಮತಗಳ ಕೊರತೆಯಿಂದ ನಾನು ಸೋತ್ತಿದ್ದೇನೆ. ಆದರೆ ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿದ್ದು ೨ ಲಕ್ಷ ಬಹುಮತದಿಂದ ಗೆಲ್ಲುವುದು ಖಚಿತ. ಕೋಲಾರ ಜಿಲ್ಲೆಯಲ್ಲಿ ಕೆ.ಹೆಚ್.ಮುನಿಯಪ್ಪ ಮತ್ತು ಕೆ.ಆರ್.ರಮೇಶ್ ಕುಮಾರ್ ಹಿರಿಯರಾಗಿದ್ದು ಅವರ ಮನವೊಲಿಸಿ ೨ ಗುಂಪುಗಳನ್ನು ಒಂದು ಮಾಡಲು ಪ್ರಯತ್ನಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆವಣಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಎಂ.ಸಿ.ನೀಲಕಂಠೇಗೌಡರು ನಿಧನಗೊಂಡು ಸುಮಾರು ೬ ತಿಂಗಳಾಗಿದ್ದು ಈ ಹುದ್ದೆಯನ್ನು ಶೀಘ್ರದಲ್ಲೇ ತುಂಬಿ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದರು. ಅಭಿಷೇಕ್ ದತ್ ಪ್ರವಾಸ

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅಭಿಷೇಕ್ ದತ್ ಭಾನುವಾರ ಮುಳಬಾಗಿಲುಗೆ ಬರುತ್ತಿದ್ದು ಇಲ್ಲಿಂದ ಎನ್‌ಡಿಎ ಮೋಸದ ಕುರಿತು ಕಾಂಗ್ರೆಸ್ ಕಾರ್ಯಕರ್ತರಿಂದ ಹಾಗೂ ಜನತೆಯಿಂದ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು.

ಕಾಂಗ್ರೆಸ್ ಮುಖಂಡರಾದ ಡಾ.ರಮೇಶ್, ಸಿದ್ದಘಟ್ಟ ಮುನಿಸಾಮಿಗೌಡ, ಕಾರ್ಗೀಲ್ ವೆಂಕಟೇಶ್, ಚಂದ್ರಪ್ಪ, ಬೈರಕೂರು ರಾಮಾಂಜಿ, ಚಂದ್ರಶೇಖರ್, ಕಾಡೇನಹಳ್ಳಿ ರವಿಕುಮಾರ್, ಯುವ ಕಾಂಗ್ರೇಸ್‌ನ ವೇಣುಕುಮಾರ್ ಇದ್ದರು.