ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುವರ್ಣ ಕಲ್ಲಕುಂಟ್ಲಾ ಅವರನ್ನು ವಶಕ್ಕೆ ಪಡೆಯಲು ಹೋದ ವೇಳೆ ಎದೆ ನೋವೆಂದು ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇದೆಲ್ಲದರ ನಡುವೆ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ.

ಹುಬ್ಬಳ್ಳಿ:

ಮಹಿಳೆಯನ್ನು ವಿವಸ್ತ್ರಗೊಳಿಸಿ ಬಂಧಿಸಿದ ಪ್ರಕರಣ ಬಿಜೆಪಿ- ಕಾಂಗ್ರೆಸ್‌ ನಡುವಿನ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದ್ದರೆ, ಘಟನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಸೇರಿ 9 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುವರ್ಣ ಕಲ್ಲಕುಂಟ್ಲಾ ಅವರನ್ನು ವಶಕ್ಕೆ ಪಡೆಯಲು ಹೋದ ವೇಳೆ ಎದೆ ನೋವೆಂದು ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇದೆಲ್ಲದರ ನಡುವೆ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ಮಧ್ಯೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ, ಸಂತ್ರಸ್ತೆ ಸುಜಾತಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆಗಿದ್ದೇನು?

ಮತದಾರರ ಪಟ್ಟಿ ಪರಿಷ್ಕರಣೆಗೆ ಪೂರ್ವ ನಡೆಯುವ ಸಮೀಕ್ಷೆ (ಎಸ್‌ಐಆರ್‌) ವೇಳೆ ಶುರುವಾದ ದೊಡ್ಡ ಗಲಾಟೆ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನನ್ವಯ ಬಿಜೆಪಿಯ ಸುಜಾತಾ ಹಂಡಿ ಅವರನ್ನು ಬಂಧಿಸಿದ್ದ ಪೊಲೀಸರು, ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ ಎಂಬುದು ಬಿಜೆಪಿ ಆರೋಪ. ಈ ಹಿನ್ನೆಲೆಯಲ್ಲಿ ಬುಧವಾರ ಬರೋಬ್ಬರಿ 5ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರು. ಬಳಿಕ ಬುಧವಾರ ರಾತ್ರಿ ಸುಜಾತಾ ಅವರ ಸಹೋದರ ಮರಿಯಾದಾಸ, ಸುವರ್ಣಾ ಸೇರಿದಂತೆ 9 ಜನರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ

ದೂರು ನೀಡಿದ್ದರು. ಇತ್ತ ಕೇಸ್‌ ದಾಖಲಾಗುತ್ತಿದ್ದಂತೆ ಅತ್ತ ಸುವರ್ಣ ಕಲ್ಲಕುಂಟ್ಲಾ ಬಂಧನದ ಭೀತಿಯಿಂದ ಗುರುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು.

ಸಂಜೆ ಭೈರಿದೇವರಕೊಪ್ಪದ ಸಂಬಂಧಿಕರ ಮನೆಯಲ್ಲಿ ಇರುವ ಮಾಹಿತಿ ತಿಳಿದು ಪೊಲೀಸರು ವಶಕ್ಕೆ ಪಡೆಯಲು ಹೋಗಿದ್ದರು. ಈ ವೇಳೆ ಕಲ್ಲಕುಂಟ್ಲಾ ಎದೆ ನೋವೆಂದು ಕುಸಿದು ಬಿದ್ದಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಪಾರ್ಚೂನರ್‌ ಕಾರಿನಲ್ಲಿಯೇ ಪೊಲೀಸರೇ ಕೆಎಂಸಿಆರ್‌ಐಗೆ ತಂದು ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಈ ನಡುವೆ ಕಾಂಗ್ರೆಸ್‌ ಮುಖಂಡರು, ಕೇಶ್ವಾಪುರ ಠಾಣೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೇ, ಬಿಜೆಪಿ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ ಸದಸ್ಯೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದು ಖಂಡನೀಯ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸುಮೋಟೋ ಕೇಸ್‌:

ಈ ಮಧ್ಯೆ ಬಿಜೆಪಿ ಮುಖಂಡೆ ಸುಜಾತಾ ಹಂಡಿ ವಿವಸ್ತ್ರಗೊಂಡಿರುವ ವಿಡಿಯೋ ವೈರಲ್‌ ಮಾಡಿರುವ ಕುರಿತು ಪೊಲೀಸರು ಸುಮೋಟೋ ಕೇಸ್‌ ದಾಖಲಿಸಿಕೊಂಡಿದ್ದಾರೆ. ವಿಡಿಯೋ ವೈರಲ್‌ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾಗಲೇ ವಿವಸ್ತ್ರವಾಗಿರುವುದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಮೂಲಕ ತನ್ನದೇನೂ ತಪ್ಪಿಲ್ಲ ಎಂಬುದನ್ನು ಬಿಂಬಿಸಲು ಪೊಲೀಸರು ಹುನ್ನಾರ ನಡೆಸಿದ್ದಾರೆ ಎಂದ ಆರೋಪ ಕೇಳಿ ಬಂದಿದೆ.

ಉಳಿದವರ ಬಂಧನ ಏಕಿಲ್ಲ?

ಬಿಜೆಪಿಯ ಸುಜಾತಾ ಹಂಡಿ ಸೇರಿದಂತೆ 6 ಜನರ ವಿರುದ್ಧ ಸುವರ್ಣ ಕಲ್ಲಕುಂಟ್ಲಾ ದೂರು ದಾಖಲಿಸಿದ್ದರು. ಇದೀಗ ಸುವರ್ಣ ಸೇರಿದಂತೆ 9 ಜನರ ವಿರುದ್ಧ ಎಫ್‌ಐಆರ್‌ ಆಗಿದೆ. ಆದರೆ ಪೊಲೀಸರು ಅತ್ತ ಸುಜಾತಾಳನ್ನು ಬಂಧಿಸಿದ್ದರೆ, ಇತ್ತ ಕಲ್ಲಕುಂಟ್ಲಾಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಎರಡು ಪ್ರಕರಣದ ಉಳಿದ ಆರೋಪಿಗಳನ್ನು ಏಕೆ ಬಂದಿಸಿಲ್ಲ ಎಂಬ ಚರ್ಚೆ ಶುರುವಾಗಿದೆ. ಕಾಂಗ್ರೆಸ್‌ ಮುಖಂಡ ಅನಿಲಕುಮಾರ ಪಾಟೀಲ ಅವರು ಹಂಡಿ ಅವರೊಂದಿಗೆ ಉಳಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರೆ, ಇತ್ತ ಉಪಮೇಯರ್‌ ಸಂತೋಷ ಚವ್ಹಾಣ, ಕಲ್ಲಕುಂಟ್ಲಾ ಅವರೊಂದಿಗೆ ಉಳಿದ ಆರೋಪಿಗಳನ್ನು ಬಂಧಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.

ಕಲ್ಲುಕುಂಟ್ಲಾ ಮೇಲೆ 3 ಕೇಸ್‌

ಇದೀಗ ಪೊಲೀಸರು ಬಂಧಿಸುವ ವೇಳೆ ಕುಸಿದು ಬಿದ್ದು ಆಸ್ಪತ್ರೆಗೆ ಸೇರಿರುವ ಸುವರ್ಣ ಕಲ್ಲಕುಂಟ್ಲಾ ಮೇಲೆ ಈ ಹಿಂದೆ 3 ಕೇಸ್‌ಗಳಿವೆ ಎಂದು ಮೂಲಗಳು ತಿಳಿಸಿವೆ.

2008, 2010ರಲ್ಲಿ ಹೊಡೆದಾಟಕ್ಕೆ ಸಂಬಂಧಪಟ್ಟಂತೆ, 2012ರಲ್ಲಿ ಕೆಎಂಸಿಆರ್‌ಐನಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್‌ ದಾಖಲಾಗಿತ್ತು. ಇದೀಗ 2026ರಲ್ಲಿ ಈ ಕೇಸ್‌ ಸೇರಿದಂತೆ ಒಟ್ಟು 4 ಕೇಸ್‌ಗಳಿವೆ ಎಂದು ಪೊಲೀಸ್‌ ಮೂಲಗಳು ತಿಳಿಸುತ್ತವೆ.