ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎರಡು ಕಾಮಗಾರಿಗೆ ಬಿಜೆಪಿ ಆಡಳಿತದಲ್ಲಿ ಅನುದಾನ ನೀಡಿದ್ದು, ಅದನ್ನು ಕಾಂಗ್ರೆಸ್‌ ಅವಧಿಯಲ್ಲಿ ಮಂಜೂರುಗೊಳಿಸಿದ್ದು ಎಂದು ಜನತೆಯ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ಅವರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಆರೋಪಿಸಿದ್ದಾರೆ.

ಇಲ್ಲಿನ ಅಟಲ್‌ ಸೇವಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ನಗರದ ಕೊಡಿಯಾಲ್‌ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್‌ ಸಂಪರ್ಕಿಸುವ ಪಂಪಿಂಗ್‌ ಕೊಳವೆಯನ್ನು ಕೊಡಿಯಾಲ್‌ಗುತ್ತಿನಿಂದ ಹಾಲ್‌ಮಾರ್ಕ್‌ ಅಪಾರ್ಟ್‌ಮಂಟ್‌ ವರೆಗೆ ಬದಲಾಯಿಸಲು 3.42 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಈಗ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರೇ ಮಂಜೂರುಗೊಳಿಸಿದ್ದು ಎಂದು ತಪ್ಪು ಮಾಹಿತಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ಥಳ ಪರಿಶೀಲನೆ ಕರೆಸುತ್ತಿದ್ದಾರೆ. ಕಾಮಗಾರಿಗೆ ಅನುಮೋದನೆ ಲಭಿಸಿದ ಬಳಿಕ ಪರಿಶೀಲಿಸುವ ವಿಚಾರ ಏನಿದೆ ಎಂದು ಪ್ರಶ್ನಿಸಿದರು.

ಪಾಲಿಕೆ ವ್ಯಾಪ್ತಿಯ ಎಂ.ಜಿ.ರಸ್ತೆಯ ಬಲ್ಲಾಳ್‌ಬಾಗ್‌ ಸೇತುವೆ ಅಭಿವೃದ್ಧಿಗೆ ನಾನು 2 ಕೋಟಿ ರು. ಮೀಸಲಿರಿಸಿದ್ದೆ. ಇದು ಕೂಡ ಪಾಲಿಕೆ ಬಿಜೆಪಿ ಆಡಳಿತದ ಅವಧಿಯಲ್ಲೇ ಮಂಜೂರುಗೊಂಡಿದೆ. ಆದರೆ ಇಲ್ಲಿ ಸೇತುವೆಯ ಅಗತ್ಯ ಇಲ್ಲ ಎಂದು ಉಸ್ತುವಾರಿ ಸಚಿವರು ದಿಢೀರ್‌ ತೀರ್ಮಾನಿಸಿ ಆ ಮೊತ್ತವನ್ನು ಪಡೀಲಿನ ಡಿಸಿ ಕಚೇರಿ ಸಂಕೀರ್ಣ ಪೂರ್ಣಗೊಳಿಸಲು ವರ್ಗಾಯಿಸಿದ್ದಾರೆ. ಹೀಗಾಗಿ ಮತ್ತು ನಾಗರಿಕರ ಒತ್ತಾಯದ ಮೇರೆಗೆ ಸೇತುವೆ ಕಾಮಗಾರಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಈಗ ಅನುಮತಿ ಲಭಿಸಿದ ಬಳಿಕ ಮತ್ತೆ ಉಸ್ತುವಾರಿ ಸಚಿವರು ಸ್ಥಳ ವೀಕ್ಷಣೆಗೆ ಮಾಡುವ ಔಚಿತ್ಯವಾದರೂ ಏನು ಎಂದು ವೇದವ್ಯಾಸ್‌ ಕಾಮತ್‌ ಪ್ರಶ್ನಿಸಿದರು. ಅಳಪೆಯಲ್ಲಿ ತಡೆಗೋಡೆ ಅಡ್ಡಿಯಾಗಿ 800 ಮನೆಗಳಿಗೆ ದಾರಿ ಸಂಪರ್ಕ ಇಲ್ಲ. ಇದನ್ನು ಪರಿಶೀಲಿಸಿ ಸರಿಪಡಿಸಲು ಉಸ್ತುವಾರಿ ಸಚಿವರು ಮುಂದಾಗಲಿ ಎಂದರು.

ಗೆಸ್ಟ್‌ ಉಸ್ತುವಾರಿ ಸಚಿವರು!: ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಶಾಸಕರನ್ನು ಕರೆಸಿ ಸಭೆ ನಡೆಸಿ ಇಲ್ಲಿನ ಆಗುಹೋಗುಗಳನ್ನು ಆಲಿಸಲು ಪುರುಸೋತ್ತು ಇಲ್ಲ. ಆದರೆ ಕಾಂಗ್ರೆಸ್‌ನ ರಾಜಕೀಯ ಕಾರ್ಯಕ್ರಮ ಇದ್ದರೆ ಬಿಡುವು ಮಾಡಿಕೊಂಡು ಬರುತ್ತಾರೆ. ಹಾಗಾಗಿ ಇಲ್ಲಿಗೆ ಅವರು ‘ಗೆಸ್ಟ್‌ ಉಸ್ತುವಾರಿ’ ಸಚಿವರಾಗಿದ್ದಾರೆ. ನಗರದಲ್ಲಿ ಪ್ರಾಕೃತಿಕ ವಿಕೋಪದಿಂದ ಉಮೇಶ್‌ ಶೇಟ್‌ ಎಂಬವರ ತಡೆಗೋಡೆ ಕುಸಿದುಬಿದ್ದಿದೆ. ಕಾಮಗಾರಿ ಮುಕ್ತಾಯಗೊಂಡು ಆರು ತಿಂಗಳು ಕಳೆದಿದೆ. ಈಗ ಐವನ್ ಡಿಸೋಜಾ ಅವರು ತಾನೇ ಮಾಡಿಸಿದ್ದು ಎಂದು ಫೋಟೋ ಹಾಕಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿತ್ತು. ಶಾಸಕರಿಗೆ ಪ್ರತಿ ವರ್ಷ 2.50 ಕೋಟಿ ರು. ಮೊತ್ತ ಬಿಡುಗಡೆಯಾಗುತ್ತಿದೆ. ಅದೇ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿದ್ದು, ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಇದು ಕೂಡ ಐವನ್‌ ಡಿಸೋಜಾ ಅವರಿಗೆ ಅರ್ಥವಾಗುತ್ತಿಲ್ಲವೇ ಎಂದು ವೇದವ್ಯಾಸ್‌ ಕಾಮತ್‌ ಪ್ರಶ್ನಿಸಿದರು. ಕಾಂಗ್ರೆಸ್‌ ಅನುದಾನ ನೀಡಿಲ್ಲ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಇಲ್ಲದಿದ್ದರೂ ನನ್ನ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ಬಾಕಿಯಾಗಿದ್ದ ಅನುದಾನ ಬಿಡುಗಡೆಗೊಳಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರ ಅನುಮೋದಿಸಿದ ಕಾಮಗಾರಿ ಹೊರತುಪಡಿಸಿದರೆ ಕಾಂಗ್ರೆಸ್‌ ಸರ್ಕಾರ ಯಾವುದೇ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಿಲ್ಲ ಎಂದರು. ಮಂಗಳೂರು ನಗರದ ಅಲ್ಲಲ್ಲಿ ಪೊಲೀಸ್‌ ಔಟ್‌ಪೋಸ್ಟ್‌ ಸ್ಥಾಪಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರ, ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ, ಮಹಾನಗರ ಪಾಲಿಕೆಯ ಅಭಿಪ್ರಾಯವನ್ನೇ ಕೇಳಿಲ್ಲ. ಜಂಟಿ ಸರ್ವೆ ಕೂಡ ನಡೆದಿಲ್ಲ. ಬೆಂಗಳೂರಿನಿಂದಲೇ ನಗರಾಭಿವೃದ್ಧಿ ಇಲಾಖೆಯಿಂದ ಟೆಂಡರ್‌ ಪಡೆದ ಕಂಪನಿಯೊಂದು ಔಟ್‌ಪೋಸ್ಟ್‌ ಸ್ಥಾಪಿಸುತ್ತಿದೆ ಎಂದರು. ಇದೇ ರೀತಿ ಮಂಗಳೂರು ಪಾಲಿಕೆ ವ್ಯಾಪ್ತಿಯ ಅಲ್ಲಲ್ಲಿ ಹೋರ್ಡಿಂಗ್‌ ಅ‍ಳವಡಿಸಲಾಗುತ್ತಿದೆ. ಇದರ ಗುತ್ತಿಗೆಯನ್ನು ಆಂಧ್ರ ಪ್ರದೇಶದ ಉದ್ದಿಮೆದಾರರಿಗೆ ನೀಡಿರುವ ಮಾಹಿತಿ ಇದೆ. ಹಾಗಾಗಿ ಇಲ್ಲಿ ಪಾಲಿಕೆಗೂ ಯಾವುದೇ ಅಧಿಕಾರ ಇಲ್ಲದಾಗಿದೆ ಎಂದರು. ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ದಿವಾಕರ್‌ ಪಾಂಡೇಶ್ವರ, ಶಕೀಲಾ ಕಾವ, ಮನೋಹರ್‌ ಕದ್ರಿ, ಮೋಹನ ಪೂಜಾರಿ, ಅಶ್ವಿತ್‌ ಕೊಟ್ಟಾರಿ, ಪ್ರವೀಣ್‌ ನಿಡ್ಡೋಡಿ, ಲಲ್ಲೇಶ್‌ ಇದ್ದರು.