ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸೋಲಿನ ಹತಾಶೆಯಿಂದ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸ್ಥಳೀಯರಲ್ಲದ ವಿಧಾನಪರಿಷತ್ ಸದಸ್ಯರನ್ನು ಸೇರ್ಪಡೆ ಮಾಡಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ತಿಳಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರೇ ಅಲ್ಲದ ವಿಧಾನಪರಿಷತ್ ಸದಸ್ಯರು ನಗರದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ, ಅಕ್ರಮ ದಾಖಲಾತಿ ಸೃಷ್ಟಿಸಿ, ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.
ಸೆಪ್ಟಂಬರ್ 12 ರಂದು ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯು ನಡೆಯಲಿದ್ದು, ಚುನಾವಣೆಗೆ 31 ನಗರಸಭಾ ಸದಸ್ಯರು, ಶಾಸಕರು ಹಾಗೂ ಸಂಸದರು ಸೇರಿ ಒಟ್ಟು 33 ಮಂದಿ ಮತ ಚಲಾಯಿಸುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಹತಾಶೆಗೊಂಡು ವಾಮಮಾರ್ಗದಿಂದ ನಗರಸಭೆಯ ಅಧಿಕಾರ ಹಿಡಿಯಲು ಅನುಸರಿಸುತ್ತಿರುವ ನೀತಿಗಳು ಪ್ರಜಾಪ್ರಭುತ್ವದ ವಿರುದ್ಧವಾಗಿವೆ ಎಂದು ದೂರಿದರು.ವಿಪ ಸದಸ್ಯರಾದ ಅನಿಲ್‌ಕುಮಾರ್, ಎಂ.ಆರ್.ಸೀತಾರಾಮ್ ಅವರನ್ನು ನಗರ ನಿವಾಸಿಗಳು ಎಂದು ನಮೂದಿಸಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಸೇರಿಸಿದ್ದು, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸೇರಿದಂತೆ ಹಲವು ವಿಧಾನಪರಿಷತ್ ಸದಸ್ಯರನ್ನು ಪಟ್ಟಿಯಲ್ಲಿ ಸೇರಿಸಲು ಹುನ್ನಾರ ನಡೆಯುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾಗುತ್ತಿರುವ ಬಿಎಲ್‌ಒ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ನುಡಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಕಾಂಗ್ರೆಸ್ ನೈತಿಕತೆ ಎತ್ತ ಕಡೆ ಸಾಗಿದೆ? ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಅಧಿಕಾರಕ್ಕಾಗಿ ಅನಧೀಕೃತವಾಗಿ ಹೊರಗಿನವರನ್ನು ಸೇರಿಸಿ ಮತದಾರರನ್ನಾಗಿಸುತ್ತಿರುವುದು ಖಂಡನೀಯ. ಇಂತಹ ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ, ಇದು ನಾಚಿಕೆಗೇಡು ಎಂದರು.ನಗರಸಭೆ ಮಾಜಿ ಅಧ್ಯಕ್ಷ ಆನಂದ್‌ರೆಡ್ಡಿ ಬಾಬು ಮಾತನಾಡಿ, ಮತದಾರನಾಗಿ ಮತದಾರರ ಪಟ್ಟಿಗಾಗಿ ಈಗಾಗಲೇ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಅವರು ನೀಡುವ ಮತದಾರರ ಪಟ್ಟಿಯಲ್ಲಿ ಸತ್ಯಾಸತ್ಯತೆ ಬಹಿರಂಗಗೊಳ್ಳಲಿದೆ. ಇದರಲ್ಲಿ ಏನಾದರೂ ವಾಮಮಾರ್ಗದಲ್ಲಿ ಹೆಸರುಗಳನ್ನು ಸೇರಿಸಿದ್ದರೆ ಕಾನೂನು ಹೋರಾಟ ನಡೆಸಲು ಮುಂದಾಗುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಮುನಿಕೃಷ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ಆನಂದ್ ಅನು, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಕಿಸಾನ್ ಕೃಷ್ಣಪ್ಪ, ಬಿಜೆಪಿ ಮುಖಂಡ ಸೀನಪ್ಪ, ವಾಪಸಂದ್ರ ಡೇರಿ ಅಧ್ಯಕ್ಷ ಜೆಸಿಬಿ ಮಂಜು ಮತ್ತಿತರರು ಇದ್ದರು.ಚುನಾವಣಾಧಿಕಾರಿಗೆ ಮನವಿ:
ಸೆಪ್ಟೆಂಬರ್ 12 ರಂದು ನಡೆಯಲಿರುವ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆಯ ಮತದಾರರ ಪಟ್ಟಿಯನ್ನು ನೀಡುವಂತೆ ನಗರಸಭೆ ಮಾಜಿ ಅಧ್ಯಕ್ಷ ಆನಂದರೆಡ್ಡಿ ಬಾಬು ಅವರು ನಗರಸಭೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಪಡೆದಿರುವ ಮತದಾರರ ಪಟ್ಟಿಯನ್ನು ಅತಿ ತುರ್ತಾಗಿ ನೀಡಬೇಕು. 31 ಜನ ನಗರಸಭೆ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರನ್ನು ಬಿಟ್ಟು ಉಳಿದ ವಿಧಾನಪರಿಷತ್ತು ಸದಸ್ಯರನ್ನು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಫಾರಂ ನಂಬರ್ -8 ರ ಪ್ರಕಾರ ಎಲ್ಲಿಂದ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಯಾವ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ ಎಂಬುದರ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೃಢೀಕರಣ ಪತ್ರ ನೀಡಬೇಕೆಂದು ಚುನಾವಣಾಧಿಕಾರಿಗೆ ನೀಡಿರುವ ಪತ್ರದಲ್ಲಿ ಕೋರಿದ್ದಾರೆ.