ಶಿವಾನಂದ ಗೊಂಬಿ

ಹುಬ್ಬಳ್ಳಿ:

ಎಸ್‌ಐಆರ್‌ (ವಿಶೇಷ ತೀವ್ರ ಮತದಾರರ ಪರಿಷ್ಕರಣೆ)ನಲ್ಲಿ ಯಾವ ಮತದಾರರು ಬಿಟ್ಟು ಹೋಗಬಾರದೆಂಬ ಉದ್ದೇಶದಿಂದ ಇದೀಗ "ಕಾಂಗ್ರೆಸ್‌ ನಡೆ ನಿಮ್ಮ ಮತ ರಕ್ಷಣೆಯ ಕಡೆ " ಎಂಬ ಘೋಷವಾಕ್ಯದೊಂದಿಗೆ "ಸಹಾಯ ಕೇಂದ್ರ " ತೆರೆದಿದೆ. ಮತದಾರರ ಪರಿಷ್ಕರಣೆ ಮುಗಿಯುವ ವರೆಗೂ ಈ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ವಿವಿಧೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಎಸ್‌ಐಆರ್‌ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಜೂ.30ರಿಂದ ಆರಂಭವಾಗಿದೆ. ಎಸ್‌ಐಆರ್‌ ನೆಪದಲ್ಲಿ ಮತದಾರರನ್ನು ಡಿಲೀಟ್‌ ಮಾಡುವ ಕೆಲಸವನ್ನು ಚುನಾವಣಾ ಆಯೋಗದ ಮೂಲಕ ಕೇಂದ್ರ ಸರ್ಕಾರ ಮಾಡುತ್ತಿದೆ ಎಂಬ ಆರೋಪ ಕಾಂಗ್ರೆಸ್‌ನದ್ದು. ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ನಡಿ ಯಾವ ಮತದಾರರು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ ಜಾಗೃತಿ ಸಮಾವೇಶ ನಡೆಸಿರುವ ಕಾಂಗ್ರೆಸ್‌ ಇದೀಗ ಸಹಾಯ ಕೇಂದ್ರ ತೆರೆಯಲು ಸೂಚನೆ ನೀಡಿದೆ.

2023ರ ಚುನಾವಣೆಯಲ್ಲಿ ಗೆದ್ದು ಶಾಸಕರಾದವರಿಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸಹಾಯ ಕೇಂದ್ರಗಳ ಜವಾಬ್ದಾರಿ ನೀಡಿದ್ದು ಎಸ್‌ಐಆರ್‌ ಬಗ್ಗೆ ಗೊಂದಲ ಇರುವ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಜಿ.ಸಿ. ಚಂದ್ರಶೇಖರ್‌ ಸೂಚನೆ ನೀಡಿದ್ದಾರೆ. ಅದರಂತೆ ಪ್ರತಿ ಪೊಲಿಂಗ್‌ ಸೆಂಟರ್‌ಗೆ ಒಂದರಂತೆ ತೆರೆಯಬೇಕು. ಇವು ಪ್ರತಿ ದಿನ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಗ್ಯಾರಂಟಿ ಸಮಿತಿ ಅಧ್ಯಕ್ಷರು ಇದರ ನಿರ್ವಹಣೆ ಮಾಡಬೇಕು. ಸಹಾಯ ಕೇಂದ್ರಗಳ ನಿರ್ವಹಣೆಯಲ್ಲಿ ವ್ಯತ್ಯಾಸವಾದರೆ ಶಾಸಕರು, 2023ರ ಅಭ್ಯರ್ಥಿಗಳೇ ಹೊಣೆಗಾರರಾಗುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.


ಮೃತರಾದ ಅಥವಾ 2 ಅಥವಾ 3 ಕಡೆಗಳಲ್ಲಿರುವ ಮತದಾರರನ್ನು ಕೈಬಿಡಬಹುದು. ಆದರೆ, ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಡದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ.

ಎಸ್‌ಐಆರ್‌ ವಾರ್‌ ರೂಮ್‌:

ಎಸ್‌ಐಆರ್‌ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಜಿಲ್ಲಾ ಎಸ್‌ಐಆರ್‌ ವಾರ್‌ ರೂಮ್‌ ತೆರೆಯಬೇಕು. ಬ್ಲಾಕ್‌ ಅಧ್ಯಕ್ಷರು, ಶಾಸಕರ ಒಬ್ಬ ಪ್ರತಿನಿಧಿ ಇಲ್ಲಿ ಕಾರ್ಯನಿರ್ವಹಿಸಬೇಕು. ಡಿಸಿಸಿ ಅಧ್ಯಕ್ಷರು ಈ ವಾರ್‌ ರೂಮ್‌ ಉಸ್ತುವಾರಿ ನೋಡಿಕೊಳ್ಳಬೇಕು. ವಾರ್‌ ರೂಮ್‌ ಸದಸ್ಯರು ಪ್ರತಿನಿತ್ಯ ಜಿಲ್ಲೆಯಲ್ಲಿ ಎಸ್‌ಐಆರ್‌ ಪರಿಸ್ಥಿತಿ ಏನಾಗಿದೆ. ಎಷ್ಟು ಪ್ರಗತಿಯಾಗಿದೆ. ಎಷ್ಟು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬುದನ್ನು ಡಿಸಿಸಿ ಅಧ್ಯಕ್ಷರ ಮೂಲಕ ಕೆಪಿಸಿಸಿಗೆ ಸಲ್ಲಿಸಬೇಕು ಎಂಬ ಖಡಕ್‌ ವಾರ್ನಿಂಗ್‌ ನೀಡಲಾಗಿದೆ. ಇದಲ್ಲದೇ, ವಿಭಾಗವಾರು ಕೂಡ ವಾರ್‌ ರೂಮ್‌ಗಳನ್ನು ಕೆಪಿಸಿಸಿ ರಚಿಸಿದೆ.

ಕಾರ್ಯಕರ್ತರಿಗೆ ಸಂದೇಶ:

ಎಸ್‌ಐಆರ್‌ನಲ್ಲಿ ಕಾರ್ಯಕರ್ತರು, ಮುಖಂಡರು ಮುತುವರ್ಜಿ ವಹಿಸಿ ಕೆಲಸ ಮಾಡಲೆಂಬ ಉದ್ದೇಶದಿಂದ ಈಗ ಚೆನ್ನಾಗಿ ಯಾರು ಕೆಲಸ ಮಾಡುತ್ತಾರೋ ಅವರಿಗೆ ಪಕ್ಷದಲ್ಲಿ ಮುಂದೆ ಸ್ಥಾನಮಾನ ದೊರೆಯುತ್ತವೆ. ಕೆಲಸ ಮಾಡದವರಿಗೆ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗೌಪ್ಯ ಸಂದೇಶವನ್ನು ಜಿಲ್ಲಾಧ್ಯಕ್ಷರ ಮೂಲಕ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಟ್ಟು ಹೋಗದಂತೆ ಕ್ರಮ:

ಯಾವುದೇ ಕಾರಣಕ್ಕೂ ಎಸ್‌ಐಆರ್‌ನಲ್ಲಿ ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಕೆಪಿಸಿಸಿ ದಿಟ್ಟ ಹೆಜ್ಜೆಯನ್ನೇನೋ ಇಟ್ಟಿದೆ. ಇದಕ್ಕೆ ಕಾರ್ಯಕರ್ತರ ಪಡೆ ಎಷ್ಟರ ಮಟ್ಟಿಗೆ ಸಾಥ್‌ ನೀಡಿ ಯಶಸ್ವಿಗೊಳಿಸುತ್ತಾರೆ ಎಂಬುದು ಕಾಯ್ದು ನೋಡಬೇಕಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲೂ ಚಟುವಟಿಕೆಗಳು ಗರಿಗೆದರಿರುವುದಂತೂ ಸತ್ಯ.ಎಸ್‌ಐಆರ್‌ ಸಮರ್ಪಕವಾಗಿ ನಡೆಯಲು, ಮತದಾರರು ಕೈಬಿಟ್ಟುಹೋಗದಂತೆ, ಮತದಾರರಿಗೆ ಎದುರಾಗುವ ಸಮಸ್ಯೆ ಬಗೆಹರಿಸಲು ಕೆಪಿಸಿಸಿಯೂ ಸಹಾಯ ಕೇಂದ್ರ ತೆರೆಯಲು ಸೂಚಿಸಿದೆ. ಅದರಂತೆ ಕೆಲಸ ನಿರ್ವಹಿಸಲಾಗುತ್ತಿದೆ.

ಶಾಕೀರ ಸನದಿ, ಎಸ್‌ಐಆರ್‌ನ ಉಸ್ತುವಾರಿ, ಧಾರವಾಡ ಜಿಲ್ಲೆಪ್ರತಿ ಪೊಲಿಂಗ್‌ ಸೆಂಟರ್‌ನಲ್ಲಿ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಮತದಾರರಿಗೆ ಏನಾದರೂ ಗೊಂದಲಗಳಾದರೆ ಈ ಕೇಂದ್ರಗಳು ನೆರವಿಗೆ ಬರಲಿವೆ.

ಅನಿಲಕುಮಾರ ಪಾಟೀಲ, ಜಿಲ್ಲಾಧ್ಯಕ್ಷ, ಧಾರವಾಡ ಗ್ರಾಮೀಣ