ಸಂವಿಧಾನಪರ ಎಂದು ಹೇಳುವ ಕಾಂಗ್ರೆಸ್‌ ಸುಳ್ಳನ್ನು ಅಳಿಸಬೇಕಿದೆ: ಎನ್. ಮಹೇಶ್‌ ಕರೆ

| Published : Nov 27 2024, 01:05 AM IST

ಸಂವಿಧಾನಪರ ಎಂದು ಹೇಳುವ ಕಾಂಗ್ರೆಸ್‌ ಸುಳ್ಳನ್ನು ಅಳಿಸಬೇಕಿದೆ: ಎನ್. ಮಹೇಶ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಸಂವಿಧಾನ ಪರ ಎನ್ನುವ ಕಾಂಗ್ರೆಸ್‌ ಪಕ್ಷದ ಸುಳ್ಳು ನಿರೂಪಣೆಗಳನ್ನು ಅಳಿಸಿ ಹಾಕಬೇಕಾಗಿದೆ ಎಂದು ಮಾಜಿ ಸಚಿವ ಎನ್‌. ಮಹೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ತಾವು ಸಂವಿಧಾನದ ಪರ ಎನ್ನುವ ಕಾಂಗ್ರೆಸ್ ಪಕ್ಷದ ಸುಳ್ಳು ನಿರೂಪಣೆಗಳನ್ನು ಅಳಿಸಿ ಹಾಕಬೇಕಾಗಿದೆ ಎಂದು ಮಾಜಿ ಸಚಿವ ಎನ್. ಮಹೇಶ್‌ ಹೇಳಿದರು.

ಅವರು ಮಂಗಳವಾರ ಸಿಟಿಝನ್ ಫಾರ್ ಸೋಶಿಯಲ್‌ ಜಸ್ಟೀಸ್‌ ಸಂಘಟನೆಯ ವತಿಯಿಂದ ಸಂವಿಧಾನ ದಿನಾಚರಣೆಯಂಗವಾಗಿ ಸಂವಿಧಾನ ಸಮ್ಮಾನ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು ಲೋಕಸಭೆಯಲ್ಲಿ ಮಂಡಿಸಿದ್ದ ದೇಶದ ಶೇ. 50 ರಷ್ಟಿರುವ ಮಹಿಳೆಯರಿಗೆ ಸಮಾನತೆಯನ್ನು ನೀಡುವ ಪ್ರಸ್ತಾಪವನ್ನು ಕಾಂಗ್ರೆಸ್ ಸರ್ಕಾರ ವಿರೋಧಿಸಿತ್ತು. ಶೇ. 50ರಷ್ಟಿರುವ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಪ್ರಸ್ತಾಪವನ್ನು 3 ಬಾರಿ ಕಾಂಗ್ರೆಸ್ ತಿರಸ್ಕರಿಸಿತ್ತು. ಇಂತಹ ಕಾಂಗ್ರೆಸ್ ಗೆ ತಾನು ಸಂವಿಧಾನ ಪರ ಎನ್ನುವ ನೈತಿಕತೆ ಇದೆಯೇ ಎಂದವರು ಪ್ರಶ್ನಿಸಿದರು.

6 ಪಂಚ ವಾರ್ಷಿಕ ಯೋಜನೆಗಳಲ್ಲಿ ಕಾಂಗ್ರೆಸ್ ಸರ್ಕಾರ ಪ.ಜಾ. ಮತ್ತು ಪ.ಪಂ.ಗಳಿಗೆ ಒಂದು ಚಿಕ್ಕಾಸೂ ಅನುದಾನವನ್ನು ನೀಡಿರಲಿಲ್ಲ. ಆದರೂ ಈ ಕಾಂಗ್ರೆಸ್ ಪಕ್ಷದ ಸುಳ್ಳುಗಳನ್ನು ನಂಬಿ ಮತ ಹಾಕಿದ ಪ.ಜಾ. - ಪ.ಪಂ.ಗಳ ಜನರು ಕೇವಲ ಓಟ್‌ ಬ್ಯಾಂಕಷ್ಟೇ ಆಗಿದ್ದರು ಎಂದು ಆಕ್ರೋಷ ವ್ಯಕ್ತಪಡಿಸಿದರು.

ಇಂದು ಕೂಡ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಪ.ಜಾ. - ಪ.ಪಂ.ಗಳ 25,000 ಕೋಟಿ ರು.ಗಳ ಮೀಸಲು ಅನುದಾನವನ್ನು ಅಕ್ರಮವಾಗಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಇಂತಹ ಕಾಂಗ್ರೆಸ್ ಪಕ್ಷಕ್ಕೆ ಪ.ಜಾ. - ಪ.ಪಂ.ದವರು ಇನ್ನೇಷ್ಟು ದಿನ ಮತ ನೀಡುತ್ತೀರಿ ಎಂದು ಆಕ್ಷೇಪಿಸಿದರು.

ಅಂಬೇಡ್ಕರ್‌ - ಸರ್ದಾರ್‌ ಪಟೇಲರಿಗೆ ಒಪ್ಪಿಗೆ ಇರದಿದ್ದರೂ ಕಾಂಗ್ರೆಸ್ ಸರ್ಕಾರ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂವಿಧಾನದಲ್ಲಿ ಆರ್ಟಿಕಲ್ 370 ಸೇರಿಸಿತು. ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಇಂತಹ ಕಾಂಗ್ರೆಸ್ ಪಕ್ಷ 106 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿತ್ತು. ಈಗ ಅದೇ ಕಾಂಗ್ರೆಸ್ ಸಂವಿಧಾನವನ್ನು ರಕ್ಷಿಸಿ ಎಂದು ಹೇಳುತ್ತಿದೆ ಎಂದು ಮಹೇಶ್‌ ಟೀಕಿಸಿದರು.

ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಗೆ ಆಯ್ಕೆ ಆಗದಂತೆ ಕಾಂಗ್ರೆಸ್ ತಡೆದಿತ್ತು, ಲೋಕಸಭಾ ಚುನಾವಣೆಯಲ್ಲಿ ಸೋಲಿಸಿತ್ತು. ಅವರು ಸತ್ತಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೂ ಅವಕಾಶ ನೀಡದೇ ಅಸ್ಪೃಶ್ಯತೆ ಆಚರಿಸಿತ್ತು. ಕೊನೆಗೆ ಭಾರತ ರತ್ನ ಗೌರವವನ್ನೂ ನೀಡಲಿಲ್ಲ ಎಂದು ವಿಷಾದಿಸಿದರು.

ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದ ಬಳಿಕ ನ.26ನ್ನು ಸಂವಿಧಾನ ದಿನ ಎಂದು ಘೋಷಿಸಲು ಕೇಂದ್ರದಲ್ಲಿ ನರೇಂದ್ರ ಮೋದಿ ಬರಬೇಕಾಯಿತು. ತಾನು ಸಂವಿಧಾನಪರ, ತಾನು ಸಂವಿಧಾನ ರಕ್ಷಕ ಎನ್ನುವ ಕಾಂಗ್ರೆಸನ್ನು ನಗ್ನಗೊಳಿಸಬೇಕಾಗಿದೆ ಎಂದವರು ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಚಿಂತಕ ಗೋಕುಲದಾಸ ಬಾರ್ಕೂರು ವಹಿಸಿದ್ದರು. ಸಾಮಾಜಿಕ ಚಿಂತಕ ಚರಣ್ ಗುಂಜೂರು ಅವರು ಉಪನ್ಯಾಸ ನೀಡಿದರು. ಬರಹಗಾರ ವಿಕಾಸ್‌ ಪುತ್ತೂರು ವೇದಿಕೆಯಲ್ಲಿದ್ದರು.

ಅಭಿಯಾನದ ಮಂಗಳೂರು ವಿಭಾಗ ಸಂಚಾಲಕ ಕಿದಿಯೂರು ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿಭಾಗ ಸಹಸಂಚಾಲಕ ದಿನಕರ ಬಾಬು ವೇದಿಕೆಯಲ್ಲಿದ್ದರು. ಉಡುಪಿ ಜಿಲ್ಲಾ ಸಹಸಂಚಾಲಕ ಉಮೇಶ್‌ ನಾಯ್ಕ್ ಚೇರ್ಕಾಡಿ ಸಂವಿಧಾನದ ಪೀಠಿಕೆ ಓದಿದರು. ಶ್ರೀಕಾಂತ್‌ ನಾಯಕ್ ಅಲೆವೂರು ಸ್ವಾಗತಿಸಿ, ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ, ವಿಜಯಕುಮಾರ್ ಕೊಡವೂರು ವಂದಿಸಿದರು.