ಸಾರಾಂಶ
ಬೆಂಗಳೂರು : ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದ ಕಾಂಗ್ರೆಸ್ ಪಕ್ಷವು ತಾನು ಮಾಡಿದ ತಪ್ಪಿಗೆ 49 ವರ್ಷಗಳಾದರೂ ಕ್ಷಮೆ ಕೇಳಿಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಟೀಕಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ತುರ್ತು ಪರಿಸ್ಥಿತಿ ಹೇರುವ ಪರಿಸ್ಥಿತಿ ಎಂದಿಗೂ ಬರಬಾರದು ಎಂದಾದರೆ, ಆ ಕರಾಳ ಅಧ್ಯಾಯದ ನೆನಪು ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಾಂಗ್ರೆಸ್ಸಿಗರಿಗೆ ತಾವು ಮಾಡಿದ್ದು ತಪ್ಪು ಎಂದು ಅನಿಸಿದರೆ, ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಡಿಎನ್‍ಎಯಲ್ಲೇ ವೈಯಕ್ತಿಕ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುವ ಮನಸ್ಥಿತಿ ಇದೆ. ಈ ಮನಸ್ಥಿತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕಿತ್ತು. ತುರ್ತು ಪರಿಸ್ಥಿತಿಯ ದಿನಗಳು ದೇಶದ ಇತಿಹಾಸದಲ್ಲಿ ಕರಾಳ ದಿನಗಳು ಎಂದು ಹೇಳಿದರು.
ತನ್ನ ಸ್ವಾರ್ಥಕ್ಕಾಗಿ, ಅಧಿಕಾರದಲ್ಲಿ ಉಳಿಯಬೇಕೆಂಬ ಏಕೈಕ ದುರುದ್ದೇಶದಿಂದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನೇ ಇಂದಿರಾ ಗಾಂಧಿ ಬುಡಮೇಲು ಮಾಡಿದ್ದರು. ವಿಪಕ್ಷ ನಾಯಕರನ್ನೆಲ್ಲ ಜೈಲಿಗೆ ಅಟ್ಟಿದ್ದರು. ಪತ್ರಿಕಾ ಸ್ವಾತಂತ್ರ್ಯಹರಣ, ಮೂಲಭೂತ ಹಕ್ಕುಗಳ ದಮನ ಮಾಡಿದ್ದರು ಎಂದು ರವಿ ಟೀಕಿಸಿದರು.