ಬಿಜೆಪಿ ಮತ ಯಾಚನೆಗೆ ಕಾಂಗ್ರೆಸ್‌ ಅಡ್ಡಿ: ದೂರು ನೀಡಲು ಕಾಂಗ್ರೆಸ್‌ಗೆ ಶಾಸಕ ಸವಾಲು

| Published : Apr 20 2024, 01:00 AM IST

ಬಿಜೆಪಿ ಮತ ಯಾಚನೆಗೆ ಕಾಂಗ್ರೆಸ್‌ ಅಡ್ಡಿ: ದೂರು ನೀಡಲು ಕಾಂಗ್ರೆಸ್‌ಗೆ ಶಾಸಕ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ವಿರುದ್ಧ ದೂರು ದಾಖಲಾದರೂ ತೊಂದರೆ ಇಲ್ಲ. ಈಗಾಗಲೇ ಶಾಲಾ ವಿಚಾರದಲ್ಲಿ ಈ ಹಿಂದೆ ಶಾಸಕರಿಬ್ಬರ ವಿರುದ್ಧ ದೂರು ದಾಖಲಾಗಿಲ್ಲವೇ. ದೂರು ದಾಖಲಿಸಿದರೂ ನಾವು ಹಿಂಜರಿಯುವುದಿಲ್ಲ, ಸೂಕ್ತವಾಗಿ ಉತ್ತರಿಸುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೇಡಿಹಿಲ್‌ ಸಮೀಪದ ಚಿಲಿಂಬಿ ಸಾಯಿ ಮಂದಿರದ ಹೊರಗೆ ಬಿಜೆಪಿ ಕಾರ್ಯಕರ್ತರ ಮತ ಯಾಚನೆಗೆ ಕಾಂಗ್ರೆಸಿಗರು ಅಡ್ಡಿಪಡಿಸಿದ್ದಾರೆ. ಧಾರ್ಮಿಕ ಕೇಂದ್ರ ಪ್ರವೇಶಿಸಿ ಬಿಜೆಪಿ ಮತ ಯಾಚನೆ ಮಾಡಿಲ್ಲ. ಈ ಬಗ್ಗೆ ಸಂಶಯ ಇದ್ದರೆ ಅಲ್ಲಿನ ಸಿಸಿ ಕ್ಯಾಮರಾ ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಸವಾಲು ಹಾಕಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳಿಗೆ ತೆರಳಿ ಮತ ಯಾಚಿಸಬಾರದು ಎಂಬ ತಿಳಿವಳಿಕೆ ಬಿಜೆಪಿಗೆ ಇದೆ. ಆದರೆ ಕಾಂಗ್ರೆಸ್‌ ಧಾರ್ಮಿಕ ಕೇಂದ್ರಗಳಲ್ಲಿ ಮತ ಯಾಚನೆ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಮಾತ ಯಾಚನೆ ಮಾಡಿದ ಆ ಜಾಗ ಸಾರ್ವಜನಿಕ ಸ್ಥಳ. ಕಾಂಗ್ರೆಸ್‌ ಸೋಲಿನ ಭೀತಿಯಿಂದ ಶಾಂತಿ ಕದಡುವ ಹತಾಶ ಮನೋಭಾವ ವ್ಯಕ್ತಪಡಿಸುತ್ತಿದೆ. ಅಲ್ಲಿ ದೇವಸ್ಥಾನ ಸುತ್ತ ಲೈಟಿಂಗ್‌ ಹಾಕಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಟೌಟ್‌ ಅಳವಡಿಸಿದ್ದಾರೆ. ಅಲ್ಲಿ ಮತ ಯಾಚನೆ ಮಾಡಬಾರದು ಎಂದು ಹೇಳಲು ಅವರು ಯಾರು ಎಂದು ಪ್ರಶ್ನಿಸಿದರು.

ಗುರುವಾರದ ಘಟನೆಗೆ ಸಂಬಂಧಿಸಿ ಜಿಲ್ಲಾ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಈ ನೋಟಿಸ್‌ನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮತ ಯಾಚನೆ ಮಾಡುವ ವೇಳೆ ಗೊಂದಲ ಉಂಟಾಗಿದ್ದು, ಉತ್ತರಿಸುವಂತೆ ತಿಳಿಸಲಾಗಿದೆ. ಹೀಗಾಗಿ ನೋಟಿಸ್‌ನಲ್ಲೇ ಬಿಜೆಪಿ ಮತ ಯಾಚನೆ ಮಾಡಿದ ಜಾಗ ಸಾರ್ವಜನಿಕ ಎಂಬುದು ಸ್ಪಷ್ಟವಾಗಿದೆ. ನಾವು ನೋಟಿಸ್‌ಗೆ ಉತ್ತರಿಸುತ್ತೇವೆ. ನಮ್ಮ ವಿರುದ್ಧ ದೂರು ದಾಖಲಾದರೂ ತೊಂದರೆ ಇಲ್ಲ. ಈಗಾಗಲೇ ಶಾಲಾ ವಿಚಾರದಲ್ಲಿ ಈ ಹಿಂದೆ ಶಾಸಕರಿಬ್ಬರ ವಿರುದ್ಧ ದೂರು ದಾಖಲಾಗಿಲ್ಲವೇ. ದೂರು ದಾಖಲಿಸಿದರೂ ನಾವು ಹಿಂಜರಿಯುವುದಿಲ್ಲ, ಸೂಕ್ತವಾಗಿ ಉತ್ತರಿಸುತ್ತೇವೆ ಎಂದರು.