ಸಾರಾಂಶ
ಕೊಪ್ಪಳ:
ದೇಶದಲ್ಲಿ ಸಂವಿಧಾನಕ್ಕೆ ವಿಪತ್ತು ಎದುರಾಗುವ ಲಕ್ಷಣ ಕಾಣುತ್ತಿವೆ. ದೆಹಲಿಯಲ್ಲಿ ಸಂವಿಧಾನದ ಹೊತ್ತಿಗೆ ಸುಟ್ಟು ಹಾಕಿದ ಘಟನೆ ಕುರಿತು ಈ ಕುರಿತು ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಏ. 26ರಂದು ದಾವಣಗೆರೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ರಾಜ್ಯದ ಪ್ರತಿ ಊರು, ಕೇರಿ, ಹಾಡಿ, ಮೊಹಾಲ್ಲಾಗಳಲ್ಲಿ ಸಂವಿಧಾನ ರಕ್ಷಣಾ ಪಡೆ ಕಟ್ಟುವ ಮಹಾಯಾನಕ್ಕೆ ಚಾಲನೆ ನೀಡಲಾಗುವುದು. ಆದರಿಂದ ಸಂವಿಧಾನ ರಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಕೊಪ್ಪಳದಿಂದಲೂ ವಾಹನ ವ್ಯವಸ್ಥೆ ಕಲ್ಪಿಸಿದ್ದು, ಜನಪ್ರತಿನಿಧಿಗಳು ಹೆಚ್ಚು ಜನರನ್ನು ಕಳಿಸುವ ವ್ಯವಸ್ಥೆ ಮಾಡಬೇಕು. ಇದು ಅವರ ಜವಾಬ್ದಾರಿಯಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷದವರು ಮಾಡಬೇಕಾದ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.ಸಂವಿಧಾನ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ದೆಹಲಿಯಲ್ಲಿ ಸಂವಿಧಾನ ಪ್ರತಿ ಸುಟ್ಟು ಹಾಕಿದ ಘಟನೆಗೆ ಸಂಬಂಧಿಸಿದಂತೆ ಈ ವರೆಗೂ ಪ್ರಕರಣ ದಾಖಲಿಸಿಲ್ಲ. ಮಹಾತ್ಮ ಗಾಂಧೀಜಿ ಚಿತ್ರಕ್ಕೆ ಗುಂಡಿಟ್ಟು ವಿಘ್ನ ಸಂತೋಷ ಮೆರೆದಿದ್ದನ್ನು ನೋಡಿದ್ದೇವೆ. ದೇಶದಲ್ಲಿ ಸಂವಿಧಾನ ಬದಲಾವಣೆ ಮಾತುಗಳು ಕೇಳಿಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದಕ್ಕಾಗಿಯೇ ಈಗ ಪ್ರತಿ ಹಳ್ಳಿಗಳಲ್ಲಿ ಸಂವಿಧಾನ ರಕ್ಷಣಾ ಪಡೆ ಕಟ್ಟುವ ಮಹಾ ಕಾರ್ಯಕ್ಕೆ ದಾವಣಗೆರಿಯಲ್ಲಿ ಚಾಲನೆ ನೀಡಲಾಗುತ್ತದೆ ಎಂದರು.ಶ್ರೀಗಳು ಮೌನ ಮುರಿಯಲಿ:ಬಿಎಸ್‌ಪಿಎಲ್ ಕಾರ್ಖಾನೆ ವಿರುದ್ಧದ ಹೋರಾಟದಲ್ಲಿ ಗವಿಸಿದ್ಧೇಶ್ವರ ಸ್ವಾಮೀಜಿ, ಕಾರ್ಖಾನೆ ಸ್ಥಾಪನೆಗೆ ನೀಡಿರುವ ಅನುಮತಿ ರದ್ದುಗೊಳಿಸಿಕೊಂಡು ಬರುವಂತೆ ಜನಪ್ರತಿನಿಧಿಗಳಿಗೆ ಹೇಳಿದ್ದರು. ಆದರೆ, ಈ ವರೆಗೆ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಿಲ್ಲ. ಹೀಗಾಗಿ ಗದುಗಿನ ತೋಂಟದಾರ್ಯ ಶ್ರೀಗಳಂತೆ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೋರಾಟ ಪ್ರಾರಂಭಿಸಬೇಕು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಂಚಾಲಕ ಅಲ್ಲಪ್ರಭು ಬೆಟ್ಟದೂರು ಹೇಳಿದರು.
ಗವಿಮಠ ಶ್ರೀಗಳು ಮೌನ ಮುರಿದು, ಮತ್ತೆ ಹೋರಾಟಕ್ಕೆ ಚಾಲನೆ ನೀಡಬೇಕು. ಕೊಪ್ಪಳ ಉಳಿಯಬೇಕು ಎಂದರೇ ಕಾರ್ಖಾನೆ ಸ್ಥಾಪನೆಯಾಗಬಾರದು. ಇದಲ್ಲದೆ ಈಗಿರುವ ಕಾರ್ಖಾನೆಗಳು ವಿಸ್ತರಣೆಯಾಗಬಾರದು. ಇದಕ್ಕಾಗಿ ಯಾರೋ ಕೆಲವರು ಹೋರಾಟ ಮಾಡಿದರೇ ಸಾಲದು, ಅದು ಜನಾಂದೋಲನವಾಗಬೇಕು. ಪ್ರತಿಯೊಬ್ಬರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು. ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಸೀರಾಜ ಸಿದ್ದಾಪುರ, ಸಮಾವೇಶದ ಸಂಚಾಲಕರಾದ ರಾಜಾ ನಾಯಕ, ಮುದಕಪ್ಪ ಹೊಸಮನಿ, ಚನ್ನಬಸಪ್ಪ ಅಪ್ಪಣ್ಣವರ ಇದ್ದರು.