ಸಾರಾಂಶ
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾಂಗ್ರೆಸ್ ಕಚೇರಿಯ ಅಡಿಗಲ್ಲು ಶಂಕುಸ್ಥಾಪನಾ ಸಮಾರಂಭ ಭಾನುವಾರ ನಗರದ ವಿಜಯನಗರದ ಬಳಿ ಆಂಜನೇಯ ಪ್ರತಿಮೆ ಎದುರು ನಡೆಯಲಿದೆ ಎಂದು ನೂತನ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ .ವಿ. ಚಂದ್ರಸಾಗರ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಕಾಂಗ್ರೆಸ್ ಕಚೇರಿಯ ಅಡಿಗಲ್ಲು ಶಂಕುಸ್ಥಾಪನಾ ಸಮಾರಂಭ ಭಾನುವಾರ ನಗರದ ವಿಜಯನಗರದ ಬಳಿ ಆಂಜನೇಯ ಪ್ರತಿಮೆ ಎದುರು ನಡೆಯಲಿದೆ ಎಂದು ನೂತನ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ .ವಿ. ಚಂದ್ರಸಾಗರ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಪರ್ವ ಸಮಾವೇಶದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಯುವಕರು, ಯುವತಿಯರು ಭಾಗವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲೆಯ ಶಾಸಕರಾದ ಇಕ್ಬಾಲ್ ಹುಸೇನ್, ಬಾಲಕೃಷ್ಣ, ಯೋಗೇಶ್ವರ್, ಪರಿಷತ್ ಸದಸ್ಯರಾದ ರವಿ, ಸುಧಾಂ ದಾಸ್, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಶಾಸಕ ಬಾಲಕೃಷ್ಣ ಅವರ ನೇತೃತ್ವದಲ್ಲಿ 2 ಸಾವಿರ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಬಿಡದಿ ಮುಖಾಂತರ ರಾಮನಗರಕ್ಕೆ ಬೈಕ್ ರ್ಯಾಲಿ ಮೂಲಕ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಯುವ ಘಟಕದ ನೂತನ ಪದಾಧಿಕಾರಿಗಳು ಸಮಾರಂಭದಲ್ಲಿ ಪದಗ್ರಹಣ ಮಾಡಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತಿಗೆ ಪ್ರಮಾಣ ಮಾಡಲಿದ್ದಾರೆ, ಪಕ್ಷದ ಸಾಧನೆಗಳನ್ನು ಜನಮಾನಸಕ್ಕೆ ತಲುಪಿಸಲು ಪಣ ತೊಡಲಿದ್ದಾರೆ, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ಇದ್ದರೂ ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡಲಾಗುವುದು ಎಂದರು.ಇದೇ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳು ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಆ ಮೂಲಕ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಚಾಲನೆ ನೀಡುವರು ಎಂದು ಚಂದ್ರಸಾಗರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಕಾರ್ಯದರ್ಶಿ ಎಸ್. ವೆಂಕಟೇಶ್, ಶರತ್, ಶಿವಕುಮಾರ್, ಅರ್ಪಿತಾ ಹರೀಶ್ ಕುಮಾರ್ ಮತ್ತಿತರರು ಇದ್ದರು.ಯುವ ಕಾಂಗ್ರೆಸ್ ಸಮಾವೇಶದ ಯಶಸ್ವಿಗೆ ಶ್ರಮಿಸಿ: ಕನ್ನಡಪ್ರಭ ವಾರ್ತೆ ರಾಮನಗರಕಾಂಗ್ರೆಸ್ ಪಕ್ಷದ ಸಂಘಟನೆಯ ಮೂಲ ಬೇರಾಗಿರುವ ಯುವ ಕಾಂಗ್ರೆಸ್ ಸಮಾವೇಶದ ಯಶಸ್ವಿಗೆ ಕೂಟಗಲ್ ಹೋಬಳಿಯಿಂದ ಯುವಕರು ಮತ್ತು ಮುಖಂಡರು ಶ್ರಮಿಸುವಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್. ಎನ್. ಅಶೋಕ್ (ತಮ್ಮಾಜಿ) ಮನವಿ ಮಾಡಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ ಸಂಬಂಧ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಆಂತರೀಕ ಚುನಾವಣೆ ಯಲ್ಲಿ ಚನ್ನಪಟ್ಟಣದ ಸಿ.ವಿ.ಚಂದ್ರಸಾಗರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಸಂಘಟನೆಯ ಜವಬ್ದಾರಿ ಹೊತ್ತಿದ್ದಾರೆ. ಜೊತೆಗೆ ಅವರು ಮತ್ತು ಅವರ ತಂಡದ ಎಲ್ಲ ಪದಾಧಿಕಾರಿಗಳು ಪದಗ್ರಹಣ ಮಾಡುವ ಜೊತೆಗೆ ನಮ್ಮ ಪಕ್ಷದ ಕಚೇರಿಗೆ ವರಿಷ್ಟರು ಶಂಕುಸ್ಥಾಪನೆ ಸಹ ನೆರವೇರಿಸುತ್ತಿದ್ದಾರೆ. ಈ ದಿನಕ್ಕೆ ನಾವೆಲ್ಲ ಸಾಕ್ಷಿಯಾಗಲು ಜನರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.ಸಭೆಗೂ ಮುನ್ನಾ ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ರಾಜಕೀಯವಾಗಿ, ಅಭಿವೃದ್ಧಿ ವಿಷಯವಾಗಿ, ಪ್ರಾಧಿಕಾರ ಮತ್ತು ವಿವಿಧ ಸಮಿತಿಗಳಿಗೆ ನಾಮನಿರ್ದೇಶಿತ ಸದಸ್ಯರ ನೇಮಕ ಮಾಡುವ ವೇಳೆ ಕೂಟಗಲ್ ಹೋಬಳಿಯ ಮುಖಂಡರನ್ನು ಕಡೆಗಣಿಸಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಿಡದಿ ಹೋಬಳಿಗೆ ಸೀಮಿತವಾಗಿದ್ದು, ಬ್ಲಾಕ್ ಅಧ್ಯಕ್ಷರು ಬಿಡದಿ ಹೋಬಳಿ ಮುಖಂಡರಿಗೆ ಜವಬ್ದಾರಿ ಮತ್ತು ಅಧಿಕಾರ ಕೊಡುವಲ್ಲಿ ನಿರತರಾಗಿದ್ದಾರೆ. ಕೂಟಗಲ್ ಹೋಬಳಿಯನ್ನು ಒಂದು ಬ್ಲಾಕ್ ಮಾಡಿ ಒಬ್ಬರಿಗೆ ಪಕ್ಷ ಸಂಘಟನೆಯ ಜವಬ್ದಾರಿ ವಹಿಸುವ ಅವಶ್ಯಕತೆಯಿದೆ ಎಂದು ಅಶೋಕ್ ಸಮ್ಮುಖ ದಲ್ಲಿಯೇ ಅಸಮಾಧಾನ ಹೊರ ಹಾಕಿದರು. ತಾಪಂ ಮಾಜಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಮುಖಂಡ ರಾದ ಲಕ್ಷ್ಮೀಪುರ ಗುಂಡಪ್ಪ, ನಂದೀಶ್, ಎರೇಹಳ್ಳಿ ಮಹದೇವಯ್ಯ. ಮಹೇಶ್ ಮತ್ತಿತರರು ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕೂಟಗಲ್ ಹೋಬಳಿಯನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಸಮಸ್ಯೆ ಹೇಳಿದರೆ ಮುಂದೆ ಸರಿಪಡಿಸೋಣ ಎಂದಷ್ಟೆ ನೀವು ಮತ್ತು ಬಾಲಕೃಷ್ಣ ಅವರು ಹೇಳುತ್ತೀರಿ. ನಮ್ಮನ್ನು ಸಮಾವೇಶಗಳಿಗೆ ಜನರನ್ನು ಕರೆದುಕೊಂಡು ಬರಲು ಮಾತ್ರ ಸೀಮಿತ ಮಾಡಿ ಕೊಂಡಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರ ಬಂದು ಎರಡು ವರ್ಷ ಆಯಿತು. ಇನ್ನು ಗ್ರಾಮಗಳ ಸಮಸ್ಯೆಗಳಿವೆ. ಪೋಲೀಸ್ ಠಾಣೆ ಸಮಸ್ಯೆ ಬಗೆಹರಿಸಲು ಕೂಟಗಲ್ ಹೋಬಳಿ ಮುಖಂಡರಿಗೆ ಯಾರಿಗೆ ಜವಬ್ದಾರಿ ನೀಡಿದ್ದೀರಿ, ದುಡ್ಡಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂಬುದಾದರೆ ನೀವು ಯಾಕೆ ಎಂದು ತಮ್ಮಾಜಿ ಅವರನ್ನು ಪ್ರಶ್ನಿಸಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಮಂಜು ಮಾತನಾಡಿ, ಕೂಟಗಲ್ ಪರಿಮಿತಿ ರಾಮನಗರ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಒಬ್ಬರು ನಿರ್ದೇಶಕರನ್ನು ಮಾಡಿಲ್ಲ. ಬಗರ್ ಹುಕ್ಕುಂ ಸಮಿತಿ ಸದಸ್ಯರನ್ನು ನೇಮಕ ಮಾಡಿಲ್ಲ ಎಂಬ ಮುಖಂಡರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಕೂಟಗಲ್ ವ್ಯಾಪ್ತಿಯ ಮುಖಂಡರ ನೋವಿಗೆ ಶಾಸಕರು ಮನ್ನಣೆ ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಬಿಡದಿ ಮತ್ತು ಕೂಟಗಲ್ ಹೋಬಳಿಗಳಿಗೆ ಸಮಾನವಾಗಿ ಸ್ಥಾನಮಾನ ಕೊಡುವಂತೆ ಎಚ್.ಸಿ.ಬಾಲಕೃಷ್ಣ ಅವರನ್ನು ಎಲ್ಲ ಮುಖಂಡರ ಪರವಾಗಿ ಮನವಿ ಮಾಡುವುದಾಗಿ ಹೇಳಿದರು.ಸಭೆಯಲ್ಲಿ ಅರೇಹಳ್ಳಿ ಗಂಗಾಧರ್‌ಗೌಡ, ಎಸ್.ಪಿ.ಜಗದೀಶ್, ದೊಡ್ಡಗಂಗವಾಡಿ ಗೋಪಾಲ್, ಗುಂಡಪ್ಪ, ರಾಮಚಂದ್ರಯ್ಯ, ಮಹೇಶ್, ಚಂದ್ರು, ರವಿಕುಮಾರ್, ನಾಗರಾಜು, ದೊಡ್ಡವೀರಯ್ಯ, ರಾಮಕೃಷ್ಣ ಹಾಪ್ಕಾಮ್ಸ್ ಪುಟ್ಟಸ್ವಾಮಿ, ಕೂಟಗಲ್ ಸಿದ್ದರಾಜು, ಹರೀಶ್ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಭಾಗವಹಿಸಿದ್ದರು.ಕಾಂಗ್ರೆಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ತಮ್ಮೆಲ್ಲರ ಅಭಿಪ್ರಾಯಗಳು ಮತ್ತು ಯೋಚನೆ ಸರಿಯಿದೆ. ಈ ಬಗ್ಗೆ ಶಾಸಕರಾದ ಬಾಲಕೃಷ್ಣ ಅವರ ಗಮನ ಸೆಳೆದು ತಮ್ಮ ನೋವನ್ನು ಸರಿಪಡಿಸಲು ಹಾಗೂ ಅಭಿವೃದ್ದಿ ಕಾರ್ಯಗಳು ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಹೋಬಳಿ ಮುಖಂಡರ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ಜೂನ್ ಮೊದಲ ವಾರದಲ್ಲಿ ಕೂಟಗಲ್‌ನಲ್ಲಿಯೇ ಸಭೆ ನಡೆಸಲು ದಿನಾಂಕವನ್ನು ನಿಗಧಿ ಮಾಡಲಾಗುವುದು.- ಎಚ್.ಎನ್.ಅಶೋಕ್ (ತಮ್ಮಾಜಿ), ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್