ಕಾಂಗ್ರೆಸ್‌ ವಿರೋಧಿ ಎಸ್.ರಾಮಪ್ಪ ಉಚ್ಚಾಟಿಸಿ

| Published : Aug 26 2025, 01:02 AM IST

ಸಾರಾಂಶ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹರಿಹರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಪಕ್ಷವಿರೋಧಿ ಹೇಳಿಕೆ ನೀಡಿರುವ ಮಾಜಿ ಶಾಸಕ ಎಸ್.ರಾಮಪ್ಪ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ, ತಕ್ಷಣವೇ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹರಿಹರ ತಾಲೂಕು ಕಾಂಗ್ರೆಸ್ ಮುಖಂಡ ದಾದಾಪೀರ್‌ ಬಾವಿಹಾಳ್‌ ಒತ್ತಾಯಿಸಿದ್ದಾರೆ.

- ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಹೇಳಿಕೆ ಬ್ಲ್ಯಾಕ್‌ಮೇಲ್ ತಂತ್ರ: ತಾಲೂಕು ಕಾಂಗ್ರೆಸ್‌ ಕಿಡಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹರಿಹರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಪಕ್ಷವಿರೋಧಿ ಹೇಳಿಕೆ ನೀಡಿರುವ ಮಾಜಿ ಶಾಸಕ ಎಸ್.ರಾಮಪ್ಪ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೇ, ತಕ್ಷಣವೇ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹರಿಹರ ತಾಲೂಕು ಕಾಂಗ್ರೆಸ್ ಮುಖಂಡ ದಾದಾಪೀರ್‌ ಬಾವಿಹಾಳ್‌ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿಸಿದ್ದರಿಂದ ಅನ್ಯಾಯವಾಯಿತು ಎಂದು ಹೇಳುವ ಇದೇ ರಾಮಪ್ಪ, 2013ರಲ್ಲಿ ಮಾಜಿ ಸಚಿವ ಡಾ. ವೈ.ನಾಗಪ್ಪ ವಿರುದ್ಧ ಟಿಕೆಟ್ ನೀಡಿದಾಗಲೂ, ಅಂದು ಡಾ.ನಾಗಪ್ಪ ಅವರಿಗೆ ಅನ್ಯಾಯವಾಗಿತ್ತು ಎನಿಸಲಿಲ್ಲವೇ? 2013ರಲ್ಲಿ ನೀವು ಸೋತರೂ 2018ರಲ್ಲಿ ಪಕ್ಷ ನಿಮಗೆ ಟಿಕೆಟ್ ನೀಡಿತು. ಆಗ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮದಿಂದ ಗೆದ್ದು ಶಾಸಕರಾದವರು ನೀವು ಎಂದು ತಿಳಿಸಿದರು.

ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಎಸ್.ರಾಮಪ್ಪಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ. ಆಗಲೂ ನಿಮ್ಮ ವಾರ್ಡ್‌ನಿಂದಲೇ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತಗಳು ಬಂದಿವೆಯೆಂದರೆ ಇದರಲ್ಲಿ ನಿಮ್ಮ ಪಕ್ಷನಿಷ್ಠೆ ಏನೆಂದು ತಿಳಿಯುತ್ತದೆ. ಕಾಂಗ್ರೆಸ್ ಪಕ್ಷ ದೊಡ್ಡದಾಗಿದ್ದು, ನಮ್ಮ ಪಕ್ಷದಲ್ಲಿರುವುದಕ್ಕೆ ರಾಮಪ್ಪಗೆ ಗೌರವ, ಮನ್ನಣೆ ಸಿಗುತ್ತಿದೆ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಹರಿಹರ ನಗರಸಭೆಗೆ 2 ಅವಧಿಗೆ ಅಧ್ಯಕ್ಷರಾಗಿ ಮಾಡಿದೆ. 2 ಸಲ ಟಿಕೆಟ್ ಸಹ ನೀಡಿದೆ. ಹಾಗಿದ್ದರೂ ಪಕ್ಷದ ವಿರುದ್ಧ ಮಾತನಾಡುತ್ತಿರುವ ಎಸ್.ರಾಮಪ್ಪ ಅವರಿಗೆ ಪಕ್ಷದಲ್ಲಿ ವ್ಯಕ್ತಿ ಪೂಜೆಯಾಗಲೇ, ಬ್ಲ್ಯಾಕ್ ಮೇಲ್ ತಂತ್ರಗಾರಿಕೆಯಾಗಲೀ ನಡೆಯುವುದಿಲ್ಲ ಎಂಬುದನ್ನು ಮನಗಾಣಬೇಕು. ನಮ್ಮ ಪಕ್ಷದಲ್ಲಿ ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ ಅವಕಾಶವಿದೆ. ವಿದ್ಯಾವಂತ, ಉತ್ಸಾಹಿ, ಜನಾನುರಾಗಿ ವ್ಯಕ್ತಿತ್ವದ ಶ್ರೀನಿವಾಸ ನಂದಿಗಾವಿಗೆ ಪಕ್ಷ ಟಿಕೆಟ್ ನೀಡಿದ್ದು ಸರಿಯಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ರಾಜ್ಯ ಕಾರ್ಯದರ್ಶಿ ಅಬು ತಾಹೀರ್‌ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೇವಲ 4304 ಮತಗಳಿಂದ ನಂದಿಗಾವಿ ಶ್ರೀನಿವಾಸ ಸೋತಿದ್ದಾರೆಯೇ ಹೊರತು, ನಿಮ್ಮಂತೆ ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ವಿರುದ್ಧ 2013ರಲ್ಲಿ ನೀವು 19053 ಮತಗಳಿಂದ ಸೋತಂತಲ್ಲ. ಪಕ್ಷದ ಮಾಜಿ ಶಾಸಕನಾಗಿ ನೀವು ಮತ್ತೆ ಟಿಕೆಟ್‌ಗೆ ಪ್ರಯತ್ನಿಸುತ್ತೇನೆ, ಟಿಕೆಟ್ ತಂದೇ ತರುತ್ತೇನೆಂದಿದ್ದರೆ ನಾವೂ ಒಪ್ಪುತ್ತಿದ್ದೆವು. ಆದರೆ, ಪಕ್ಷದ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವ ಬ್ಲ್ಯಾಕ್ ಮೇಲ್ ಮಾಡುವುದನ್ನೆಲ್ಲಾ ನಮ್ಮ ಪಕ್ಷ ಸಹಿಸಬಾರದು ಎಂದರು.

ಪಕ್ಷದ ಮುಖಂಡರಾದ ಇಮ್ತಿಯಾಜ್‌ ಜಲಾಲ್‌, ಶ್ರೀನಿಧಿ, ಮಂಜುನಾಥ, ಕರಿಬಸಪ್ಪ, ಕೃಷ್ಣಮೂರ್ತಿ, ರೇವಣಸಿದ್ದಪ್ಪ, ರಿಜ್ವಾನ್‌, ಮಲ್ಲೇಶಪ್ಪ, ಅಬ್ದುಲ್ ಕರೀಂ, ಭಾನುವಳ್ಳಿ ದಾದಾಪೀರ್‌ ಇತರರು ಇದ್ದರು.

- - -

-25ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಹರಿಹರ ತಾಲೂಕು ಕಾಂಗ್ರೆಸ್ ಮುಖಂಡರಾದ ದಾದಾಪೀರ್ ಬಾವಿಹಾಳ್, ರಾಜ್ಯ ಕಾರ್ಯದರ್ಶಿ ಅಬು ತಾಹೀರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.