ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಅಬ್ಬರ ಜೋರಾಗುತ್ತಿದೆ. ಹತ್ತಾರು ಸಮಿತಿ ಮಾಡಿ ಬಿಜೆಪಿ ಪ್ರಚಾರಕ್ಕೆ ಇಳಿದರೆ, ಕಾಂಗ್ರೆಸ್ ಕೂಡ ತಾನೇನು ಕಮ್ಮಿಯಿಲ್ಲ ಎಂದು ಅದು ಕೂಡ ಅತ್ಯಂತ ವ್ಯವಸ್ಥಿತವಾಗಿ ಪ್ರಚಾರಕ್ಕೆ ಇಳಿದಿದೆ.
1996ರಿಂದ ಈವರೆಗೆ ನಡೆದಿರುವ ಬರೋಬ್ಬರಿ 7 ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ಈ ಸಲ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದು ಪ್ರಚಾರ ನಡೆಸುತ್ತಿದೆ. ಪ್ರತಿ ಸಲ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಘೋಷಣೆ ಮಾಡುತ್ತಿದ್ದ ಕಾಂಗ್ರೆಸ್ ಈ ಸಲ ಅಹಿಂದ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಓಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿದೆ. ಕುರುಬ ಸಮುದಾಯಕ್ಕೆ ಸೇರಿರುವ ವಿನೋದ ಅಸೂಟಿಗೆ ಟಿಕೆಟ್ ನೀಡುವ ಮೂಲಕ ತನ್ನ ಚುನಾವಣಾ ತಂತ್ರಗಾರಿಕೆಯನ್ನು ಬದಲಿಸಿಕೊಂಡಿದೆ.ಹಾಗೆ ನೋಡಿದರೆ ಬಿಜೆಪಿ ಪ್ರತಿಯೊಂದಕ್ಕೆ ಸಮಿತಿ ರಚಿಸಿ ಪ್ರಚಾರ ನಡೆಸುತ್ತಿದೆ. ಈ ಮೂಲಕ ವ್ಯವಸ್ಥಿತ ಹಾಗೂ ಸಂಘಟನಾತ್ಮಕ ಪ್ರಚಾರ ನಡೆಸುತ್ತಿದೆ. ಈ ಸಲ ಕಾಂಗ್ರೆಸ್ ಕೂಡ ಅಗತ್ಯಕ್ಕೆ ತಕ್ಕಂತೆ ಸಮಿತಿಗಳನ್ನು ರಚಿಸಿಕೊಂಡಿದೆ.
ಗ್ಯಾರಂಟಿ ರಕ್ಷೆರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ವಿಧಾನಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಇದೀಗ ಆ ಫಲಾನುಭವಿಗಳನ್ನು ಮಾತನಾಡಿಸುವ ಮೂಲಕ ಮತಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದೆ.
ಕ್ಷೇತ್ರಾದ್ಯಂತ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದಕ್ಕಾಗಿ ಕಾರ್ಯಕರ್ತರ ಪಡೆಯನ್ನು ರಚಿಸಿಕೊಂಡಿದೆ. ಇದರೊಂದಿಗೆ ಸೋಷಿಯಲ್ ಮಿಡಿಯಾವನ್ನು ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ.ಎರಡು ಜಿಪಂ ಕ್ಷೇತ್ರಗಳನ್ನು ಸೇರಿಕೊಂಡು ಮಧ್ಯ ಭಾಗದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದೆ. ಬರೋಬ್ಬರಿ 28 ಜಿಪಂ ಕ್ಷೇತ್ರಗಳಿವೆ. 14 ಸಮಾವೇಶ ನಡೆಸುವುದು. ಇದರೊಂದಿಗೆ ನಗರ ಹಾಗೂ ಪಟ್ಟಣ ವ್ಯಾಪ್ತಿಗಳಲ್ಲಿ ಬೇರೆ ಬೇರೆ ಸಮಾವೇಶ ನಡೆಸಲು ನಿರ್ಧರಿಸಿದೆ. ಜತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಕರೆಯಿಸಿ ಪ್ರತ್ಯೇಕ ಸಮಾವೇಶ ನಡೆಸಲು ಉದ್ದೇಶಿಸಿದೆ. ಬೂತ್ ಮಟ್ಟದ, ಮಹಿಳಾ ಘಟಕ, ಯುವ ಘಟಕ ಹೀಗೆ ಎಲ್ಲ ಘಟಕಗಳು ಶ್ರಮಿಸುತ್ತಿವೆ.
ಚುನಾವಣಾ ಉಸ್ತುವಾರಿ ಹೊತ್ತಿರುವ ಸಚಿವ ಸಂತೋಷ ಲಾಡ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಇವರ ನೇತೃತ್ವದಲ್ಲಿ ಕಾರ್ಯಕರ್ತರು ಹುರುಪಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಎಂದರೆ ಗುಂಪುಗಾರಿಕೆ, ಭಿನ್ನಮತಕ್ಕೆ ಹೆಸರಾಗಿರುವ ಪಕ್ಷ. ಹೀಗಾಗಿ ಫಲಿತಾಂಶದ ಬಳಿಕ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸೇ ಕಾರಣ ಎಂಬ ಮಾತು ಸಹಜವಾಗಿ ಕೇಳಿ ಬರುತ್ತದೆ. ಹೀಗಾಗಿ ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕಿದೆ ಎಂಬುದು ಸಾಮಾನ್ಯ ಕಾರ್ಯಕರ್ತರ ಅಂಬೋಣಸಮಿತಿ ರಚಿಸಿ ಪ್ರಚಾರ
ಕಳೆದ 3 ತಿಂಗಳ ಹಿಂದೆಯೇ ಪ್ರಚಾರ ಶುರು ಮಾಡಿದ್ದೇವೆ. ಇದೀಗ ಎರಡು ಜಿಪಂ ಕ್ಷೇತ್ರಗಳಲ್ಲೊಂದರಂತೆ ಸಮಾವೇಶ ನಡೆಸಲಾಗುತ್ತಿದೆ. ನಂತರ ಒಂದೆರಡು ಬೃಹತ್ ಸಮಾವೇಶ ನಡೆಸಲಾಗುವುದು. ಇದಕ್ಕೆ ಅಗತ್ಯಕ್ಕೆ ತಕ್ಕಂತೆ ಸಮಿತಿಗಳನ್ನು ರಚಿಸಿಕೊಂಡು ಪ್ರಚಾರ ನಡೆಸುತ್ತಿದ್ದೇವೆ. ಈ ಸಲ ನಮ್ಮ ಅಭ್ಯರ್ಥಿ ಗೆಲುವು ಕಟ್ಟಿಟ್ಟ ಬುತ್ತಿ.- ಸಂತೋಷ ಲಾಡ್, ಚುನಾವಣಾ ಉಸ್ತುವಾರಿ ಹಾಗೂ ಸಚಿವರು