ಸಾರಾಂಶ
ಬೆಂಗಳೂರು: ‘ದೇವರಾಜ ಅರಸು ಅವರು ಹಾಕಿದ ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ನಮ್ಮ ಸರ್ಕಾರ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಉಳಿದ ಯಾವ ಪಕ್ಷಗಳಿಗೂ ಸಾಮಾಜಿಕ ನ್ಯಾಯದ ಕುರಿತು ಬದ್ಧತೆ ಇಲ್ಲ. ಬದಲಿಗೆ ಎಲ್ಲ ಪಕ್ಷಗಳೂ ಸಾಮಾಜಿಕ ನ್ಯಾಯದ ವಿರುದ್ಧವಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಗುರುವಾರ ಏರ್ಪಡಿಸಿದ್ದ ದಿವಂಗತ ದೇವರಾಜ ಅರಸು ಅವರ 42ನೇ ಪುಣಸ್ಮರಣೆ ಅಂಗವಾಗಿ ವಿಧಾನಸೌಧ ಆವರಣದಲ್ಲಿನ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇವರಾಜ ಅರಸು ಅವರು ರಾಜ್ಯದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು. ಅವರು 8 ವರ್ಷ ಸಾಮಾಜಿಕ ನ್ಯಾಯದ ಅಡಿಪಾಯ ಹಾಕಿದರು. ಅದರ ಬುನಾದಿಯ ಮೇಲೆ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಮುಂದುವರೆದಿದೆ. ಕಾಂಗ್ರಸ್ಸೇತರ ಪಕ್ಷಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಿದ್ದು, ನಾವು ಮಾತ್ರ ಅದಕ್ಕೆ ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಅರಸು ಜಾತ್ಯತೀತ ವ್ಯಕ್ತಿ :
ದೇವರಾಜ ಅರಸು ಅವರು ಒಬ್ಬ ಜಾತ್ಯತೀತ ವ್ಯಕ್ತಿ. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದರು. ಬಡವ, ಹಿಂದುಳಿದ ವರ್ಗಗಳಿಗೆ ಎಲ್ಲಾ ರೀತಿಯಲ್ಲೂ ಶಕ್ತಿ ನೀಡುವ ಪ್ರಯತ್ನ ಮಾಡಿದರು. ಅವರ ಹಾದಿ ಯಲ್ಲಿಯೇ ನಡೆಯುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.