ಎಸ್ಐಆರ್ ಪ್ರಕ್ರಿಯೆಯಲ್ಲಿ ಲಕ್ಷಗಟ್ಟಲೆ ಹೆಸರು ನಾಪತ್ತೆಯಾಗಿವೆ ಎಂದು ಹೇಳುವ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಆ ಜನ ಎಲ್ಲಿದ್ದಾರೆ, ಅವರ್‍ಯಾರು ಪ್ರತಿಭಟನೆಗೆ ಏಕೆ ಬರುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು.

ಹುಬ್ಬಳ್ಳಿ:

ದೇಶದಲ್ಲಿ ಎಸ್ಐಆರ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಅರಾಜಕತೆ ಉಂಟು ಮಾಡಲು ಹುನ್ನಾರ ನಡೆಸಿವೆ. ಪ್ರತಿಭಟನೆ ಹೆಸರಿನಲ್ಲಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪರವಾನಗಿ ಪಡೆಯದೆ ಪ್ರತಿಭಟನೆ ಹಮ್ಮಿಕೊಂಡು ಜನರ ದಿಕ್ಕು ತಪ್ಪಿಸಲು ಯತ್ನಿಸಲಾಗುತ್ತಿದೆ. ಹೋರಾಟಗಳೆಲ್ಲ ಫ್ಲಾಪ್ ಶೋ ಆಗಿವೆ ಎಂದು ಶಾಸಕ ಮಹೇಶ ಟೆoಗಿನಕಾಯಿ ಕಿಡಿಕಾರಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ಲಕ್ಷಗಟ್ಟಲೆ ಹೆಸರು ನಾಪತ್ತೆಯಾಗಿವೆ ಎಂದು ಹೇಳುವ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಆ ಜನ ಎಲ್ಲಿದ್ದಾರೆ, ಅವರ್‍ಯಾರು ಪ್ರತಿಭಟನೆಗೆ ಏಕೆ ಬರುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ವಿದೇಶಿ ಶಕ್ತಿಗಳ ಸಹಾಯ ಪಡೆದು ಸಿಜೆಪಿ ಪಕ್ಷವನ್ನು ಹೋರಾಟದಲ್ಲಿ ಬಳಸಿಕೊಂಡು ಯುವಕರ ದಾರಿ ತಪ್ಪಿಸುತ್ತಿದೆ. ವಿದೇಶಿ ಪ್ರಾಯೋಜಕತ್ವ ಪಡೆದಿರುವ ಸಿಜೆಪಿ ಪಕ್ಷವು ಹೋರಾಟದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹೋರಾಟದ ನೆಪದಲ್ಲಿ ಕೇಂದ್ರ ಸರ್ಕಾರವನ್ನು ಅಸ್ಥಿರತೆಗೊಳಿಸುವ ಹುನ್ನಾರ ನಡೆಸಿದ್ದು, ಇದು ಯಶಸ್ವಿಯಾಗುವುದಿಲ್ಲ. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಸಂವಿಧಾನ ವಿರೋಧಿ ಕೆಲಸವನ್ನು ಇಂಡಿಯಾ ಕೂಟ ಮಾಡುತ್ತಿದ್ದು ಸಿಜೆಪಿ ಪಕ್ಷವನ್ನು ಬಳಸಿಕೊಂಡು ಹೋರಾಟ ಮಾಡುವುದು ಕಾಂಗ್ರೆಸ್ ಪಕ್ಷದ ಅವನತಿಗೆ ಸಾಕ್ಷಿ ಎಂದು ತಿಳಿಸಿದ್ದಾರೆ.