ಶೃಂಗೇರಿ ವಿಧಾನಸಭಾ ಚುನಾವಣೆಯ ಮರುಎಣಿಕೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿ ರಾಜೇಗೌಡರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಸೋಮವಾರ ಸಂಜೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಭೆ ಸೇರಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶೃಂಗೇರಿ ವಿಧಾನಸಭಾ ಚುನಾವಣೆಯ ಮರುಎಣಿಕೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿ ರಾಜೇಗೌಡರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಸೋಮವಾರ ಸಂಜೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಭೆ ಸೇರಿ ವಿಜಯೋತ್ಸವ ಆಚರಿಸಿದರು.

ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಸತ್ಯಮೇವ ಜಯತೇ ಎಂಬ ಜಯಘೋಷ ಮೊಳಗಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಆರ್ ರವಿಶಂಕರ್ ಮಾತನಾಡಿ, ಸುಪ್ರೀಂ ಕೋರ್ಟಿನಲ್ಲಿ ಕಪಿಲ್ ಸಿಬಾಲ್ ಸೇರಿ 3 ವಕೀಲರು ವಾದ ಮಾಡಿ ನಮ್ಮ ಸಂವಿಧಾನ, ಸ್ವಾಭಿಮಾನ ಉಳಿಸಿಕೊಟ್ಟಿದ್ದಾರೆ. ರಾಜೇಗೌಡರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಮಾಜಿ ಸಚಿವರು, ಬಿಜೆಪಿ ಪಕ್ಷದ ಮುಖಂಡರು ಸೇರಿ ಲೋಕಾಯುಕ್ತ, ಇಡಿ ಬಳಸಿಕೊಂಡು ರಾಜೇಗೌಡರಿಗೆ ಕಿರುಕುಳ ನೀಡಿದ್ದರು. ಮಾಜಿ ಸಚಿವರು ರಾಜೇಗೌಡರಿಗೆ ಬಂದಿದ್ದ ಮತ ಪತ್ರ ತಿದ್ದಿ 5 ದಿನ ಶಾಸಕರಾಗಿದ್ದರು. ಈಗ ಮತ್ತೆ ಮಾಜಿ ಆಗಿದ್ದಾರೆ. ಮಾಜಿ ಸಚಿವರು ಶೃಂಗೇರಿ ಮಠ, ಸ್ವಾಮೀಜಿಗಳನ್ನು ಪದೇ, ಪದೇ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದವರೂ ಸಹ ಶೃಂಗೇರಿ ಮಠದ ಭಕ್ತರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಲಿ. ರಾಜೇಗೌಡರು ಗೆಲುವು ಸಂವಿಧಾನ ಗೆಲವು, ಕಾಂಗ್ರೆಸ್‌ ಪಕ್ಷದ ಗೆಲವು ಹಾಗೂ ಪ್ರಜಾಪ್ರ ಭುತ್ವದ ಗೆಲುವಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್‌.ಎಂ.ಮನು, ಇ.ಸಿ.ಜೋಯಿ, ಕೆ.ವಿ.ಸಾಜು, ಪ್ರಶಾಂತಶೆಟ್ಟಿ, ಬಿ.ಎಸ್.ಸುಬ್ರಮಣ್ಯ ಮಾತನಾಡಿ, ಸುಪ್ರೀಂ ಕೋರ್ಟ್ ಮದ್ಯಂತರ ಆದೇಶ ಸತ್ಯಕ್ಕೆ ಸಂದ ಜಯವಾಗಿದೆ.ಸಂವಿಧಾನಕ್ಕೆ ಸಿಕ್ಕ ಜಯವಾಗಿದೆ ಎಂದರು.

ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಸ್ಸು ನಿಲ್ದಾಣ ಸಮೀಪದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಜಾಮೀಯ ಮಸೀದಿ, ಲಿಟಲ್ ಪ್ಲವರ್ ಚರ್ಚ್, ಸಿಂಹನಗದ್ದೆ ಬಸ್ತಿಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ನಂತರ ಬಿ.ಎಚ್.ಕೈಮರದವರೆಗೆ ಜೈಕಾರ ಹಾಕುತ್ತ ಮೆರವಣಿಗೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುನೀಲ್ ಕುಮಾರ್, ಬೆನ್ನಿ, ಜುಬೇದ,ಸಮೀರ ನಹೀಂ, ಎಚ್‌.ಎಂ.ಶಿವಣ್ಣ, ಬಿಳಾಲು ಮನೆ ಉಪೇಂದ್ರ,ದೇವಂತರಾಜ್, ಸಿಗ್ಬುತ್ತುಲ್ಲಾ, ಪಾನಿ ಶ್ರೀಧರ್,ಎನ್.ಪಿ.ರವಿ, ಎನ್.ಪಿ.ರಮೇಶ್, ಎಚ್.ಇ.ಮಹೇಶ್, ಸುನೀಲ್, ಇಂದಿರಾ ನಗರ ರಘು, ಕೆ.ಗಂಗಾಧರ್ ಮತ್ತಿತರರು ಇದ್ದರು.