ಸಾರಾಂಶ
ಕನ್ನಡಪ್ರಭ ವಾರ್ತ, ತುಮಕೂರು ಯುಪಿಐ ಬಳಸಿ ವ್ಯಾಪಾರ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳಿಗೆ ರಾಜ್ಯದ ತೆರಿಗೆ ಅಧಿಕಾರಿಗಳು ನೋಟೀಸ್ ನೀಡಿ ಗೊಂದಲ, ಭೀತಿ ಉಂಟು ಮಾಡುತ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರು ಡಿಜಿಟಲ್ ಇಂಡಿಯಾ ವ್ಯವಸ್ಥೆ ಬಗ್ಗೆ ಕೆಟ್ಟ ಅಭಿಪ್ರಾಯ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ತುಮಕೂರು ನಗರ ಮಂಡಲ ಅಧ್ಯಕ್ಷ ಟಿ.ಕೆ.ಧನುಷ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.ಸಣ್ಣ ವ್ಯಾಪಾರಿಗಳು 40 ಲಕ್ಷರೂ.ವರೆಗೆ ತೆರಿಗೆ ರಹಿತ ವಹಿವಾಟು ನಡೆಸಲು ಅವಕಾಶವಿದೆ. ಆದರೆ ರಾಜ್ಯದ ತೆರಿಗೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟೀಸ್ ನೀಡಿ ಭೀತಿ ಉಂಟು ಮಾಡುತ್ತಿದ್ದಾರೆ. ಇದರಿಂದ ಅನೇಕ ವ್ಯಾಪಾರಿಗಳು ಯುಪಿಐ ಬಳಕೆ ನಿಲ್ಲಿಸಿ ನಗದು ವ್ಯವಹಾರ ಆರಂಭಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ವ್ಯಾಪಾರಿಗಳಲ್ಲಿ ಅರಿವು ಮೂಡಿಸಿ ಸರಳ, ನಿಖರವಾದ ಡಿಜಿಟಲ್ ವ್ಯವಸ್ಥೆಯನ್ನು ಮುಂದುವರೆಸಲು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಭಾರತೀಯ ಜನತಾ ಪಕ್ಷದ ಎಲ್ಲಾ ಚಟುವಟಿಕೆಗಳೂ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಯಲ್ಲೇ ವ್ಯವಸ್ಥಿತವಾಗಿ ನಡೆಯುತ್ತಿವೆ. ಡಿಜಿಟಲ್ ವ್ಯವಸ್ಥೆ ವಿರುದ್ಧ ಕಾಂಗ್ರೆಸ್ ನಡೆಸುವ ಹುನ್ನಾರವನ್ನು ಜನರಿಗೆ ತಿಳಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ಅನಾಚಾರಗಳ ವಿರುದ್ಧ ಹೋರಾಟ ರೂಪಿಸಲೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಕ್ಷವನ್ನು ಬಲವಾಗಿ ಸಂಘಟಿಸಲುಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಪ್ರತಿ ವರ್ಷದಂತೆ ಈ ಬಾರಿಯೂ ಬಿಜೆಪಿ ಈ ತಿಂಗಳ 26 ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತದೆ. ಅಂದು ನಿವೃತ್ತ ಸೈನಿಕರನ್ನು ಗೌರವಿಸಿ, ಸೇವಾ ಅವಧಿಯಲ್ಲಿನ ಅವರ ಅನುಭವ ಹಂಚಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರವಿಶಂಕರ್ ಹೆಬ್ಬಾಕ ಹೇಳಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪಕ್ಷದ ಹೆಚ್ಚಿನ ಚಟುವಟಿಕೆಗಳು ಜಿಲ್ಲಾ ಕೇಂದ್ರದಲ್ಲೇ ಹೆಚ್ಚು ನಡೆಯುವುದರಿಂದ ಜಿಲ್ಲೆಯ ಇತರೆ ಮಂಡಲಗಳಿಗಿಂತಾ ತುಮಕೂರು ನಗರ ಮಂಡಲ ಹೆಚ್ಚು ಸಕ್ರಿಯವಾಗಿರಬೇಕು. ನಗರ ಮಂಡಲದ ಎಲ್ಲಾ ಮುಖಂಡರು, ಕಾರ್ಯಕರ್ತರು ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ.ಚುನಾವಣೆಗಳನ್ನು ಗೆಲ್ಲುವುದೇ ರಾಜಕೀಯ ಪಕ್ಷಗಳ ಉದ್ದೇಶ ಆಗಿರುವುದರಿಂದ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.ಉತ್ಸಾಹಿ ಯುವಕ ಧನುಷ್ ಅವರು ನಗರ ಮಂಡಲ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನಂತೆ ಇವರಿಗೂ ಎಲ್ಲರೂ ಸಹಕಾರ ನೀಡಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಸಹಕರಿಸಬೇಕು ಎಂದು ಶಾಸಕರು ಕೋರಿದರು.
ಈ ವೇಳೆ ನಗರ ಮಂಡಲದ ನಿಕಟಪೂರ್ವಅಧ್ಯಕ್ಷ ಟಿ.ಎಚ್.ಹನುಮಂತರಾಜುಅವರು ನೂತನಅಧ್ಯಕ್ಷಟಿ.ಕೆ.ಧನುಷ್‌ಅವರಿಗೆ ಪಕ್ಷದ ಬಾವುಟ ನೀಡಿಅಧಿಕಾರ ಹಸ್ತಾಂತರಿಸಿದರು.ಜಿಲ್ಲೆಯ ಚುನಾವಣೆ ಉಸ್ತುವಾರಿಯಾದ ರಾಷ್ಟ್ರೀಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪೂರ್ಣಿಮಾ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೈ.ಎಚ್.ಹುಚ್ಚಯ್ಯ, ನಾಗರತ್ನಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್‌ಗೌಡ, ಹಾಲೇಗೌಡ, ನಗರ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ನಗರ ಮಂಡಲ ನಿಕಟಪೂರ್ವಅಧ್ಯಕ್ಷ ಟಿ.ಎಚ್.ಹನುಮಂತರಾಜು, ರೈತ ಮೋರ್ಚಾ ನಗರಅಧ್ಯಕ್ಷ ಸತ್ಯಮಂಗಲ ಜಗದೀಶ್ ಮೊದಲಾದವರು ಭಾಗವಹಿಸಿದ್ದರು.