ಕಾಪು ವಿಧಾನಸಭಾ ಕ್ಷೇತ್ರದ ಬಡಗುಬೆಟ್ಟು ಗ್ರಾಮದಲ್ಲಿ ನಡೆಯುವ ಪ್ರಥಮ ಉಡುಪಿ ಕಂಬಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಿವಾದ ಇದೀಗ ದೈವದೇವರುಗಳ ಅಂಗಳಕ್ಕೆ ಬಂದಿದೆ.
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಬಡಗುಬೆಟ್ಟು ಗ್ರಾಮದಲ್ಲಿ ನಡೆಯುವ ಪ್ರಥಮ ಉಡುಪಿ ಕಂಬಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಿವಾದ ಇದೀಗ ದೈವದೇವರುಗಳ ಅಂಗಳಕ್ಕೆ ಬಂದಿದೆ. ಕಂಬಳದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ತನ್ನ ಮೇಲೆ ರಾಜಕೀಯ ಕಾರಣಕ್ಕಾಗಿ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಬೆಂಬಲಿಗರೊಂದಿಗೆ ಕಾಪು ಹೊಸ ಮಾರಿಗುಡಿ ಹಾಗೂ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ದಾನದಲ್ಲಿ ಸಂಜೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ನಮಗೆ ರಾಜಕೀಯ ವಿಚಾರವಾಗಿ ದೈವ ದೇವರ ಮೊರೆ ಹೋಗುವುದು ಅನಿವಾರ್ಯ ಸ್ಥಿತಿ ಬಂದಿದೆ. ಕಂಬಳವನ್ನು ನೆಪವಾಗಿಟ್ಟುಕೊಂಡು ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಬೆಂಬಲಿಗರು ನನ್ನ ಕುಟುಂಬದ ಮೇಲೆ ಆಪಾದನೆ ಮಾಡುತ್ತಿದ್ದಾರೆ. ನಾನು ಶಾಸಕನಾಗಿ 2 ಮುಕ್ಕಾಲು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ನನಗದರ ಅವಶ್ಯಕತೆಯೂ ಇಲ್ಲ ಎಂದರು.
ನಂದಿಕೂರಿನ ಎಂ 11 ಕಂಪನಿ ಪ್ರಾರಂಭವಾದಾಗಲೂ ಆರೋಪ ಹೊರಿಸಿದರು. ಉಡುಪಿ ಕಂಬಳದ ಶಂಕು ಸ್ಥಾಪನೆಗೆ ಅಡ್ಡಿಯಾಗುವಂತೆ ಜಿಲ್ಲಾಡಳಿತದ ಮೂಲಕ ನಿಷೇದಾಜ್ಞೆ ಹಾಕಿದ್ದರು. ಜಾತಿ ಧರ್ಮ ಒಡೆಯುತ್ತಿದ್ದಾರೆ. ಇದರ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು ಎಂದರು.ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪಕ್ಷದ ಪ್ರಮುಖರಾದ ಗೋಪಾಲ ಕೃಷ್ಣ ರಾವ್, ಶ್ರೀಕಾಂತ್ ನಾಯಕ್, ಶರಣ್ ಮಟ್ಟು, ಅರುಣ್ ಶೆಟ್ಟಿ ಪಾದೂರು, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ನೀತಾ ಗುರುರಾಜ್, ಸಂದೀಪ್, ಕೇಸರಿ ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.