ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾಸಕ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

| Published : Dec 25 2024, 12:49 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾಸಕ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವೇ ಮೆಚ್ಚುವಂತಹ ನಾಯಕನ ವಿರುದ್ಧ ಮಾತನಾಡಿರುವ ಅಮಿತ್‌ ಶಾ ಅವರನ್ನು ಸಚಿವ ಸ್ಥಾನದಿಂದ ರಾಷ್ಟ್ರಪತಿಗಳು ವಜಾ ಮಾಡಬೇಕು. ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಸಿ.ಟಿ.ರವಿ ಅವರ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ರಾಜ್ಯಪಾಲರು ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿಕೊಂಡು ರದ್ದು ಪಡಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿರೋಧಿಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಅವಾಚ್ಯ ಶಬ್ದಗಳ ಬಳಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಅಂಬೇಡ್ಕರ್ ಪುತ್ಥಳಿಗೆ ಪುಪ್ಪ ನಮನ ಸಲ್ಲಿಸಿದ ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಅನಂತ್‌ರಾಂ ಬಳಿ ತೆರಳಿ ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ಹಾಗೂ ಸಿ.ಟಿ. ರವಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಕೃತಿ ದಹಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ ಅಧಿಕಾರ ಪಡೆದ ಅಮಿತ್‌ ಶಾ ಅವರು ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದರು.

ಅಮಿತ್‌ ಶಾ ಹಾಗೂ ಸಿ.ಟಿ.ರವಿ ಅವರು ಬಂಧನಕ್ಕೆ ಒಳಗಾದ ವೇಳೆ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಡಿಯಲ್ಲಿಯೇ ಜಾಮೀನಿನಿಂದ ಹೊರ ಬಂದಿರುವುದು ಎನ್ನುವುದನ್ನು ಅರಿತುಕೊಳ್ಳಬೇಕು. ಮಹಿಳೆಯರ ಬಗ್ಗೆ ಮಾನಬಂದಂತೆ ಮಾತನಾಡಿರುವ ಸಿ.ಟಿ.ರವಿ ಅವರನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಪಕ್ಷದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ವಿಶ್ವವೇ ಮೆಚ್ಚುವಂತಹ ನಾಯಕನ ವಿರುದ್ಧ ಮಾತನಾಡಿರುವ ಅಮಿತ್‌ ಶಾ ಅವರನ್ನು ಸಚಿವ ಸ್ಥಾನದಿಂದ ರಾಷ್ಟ್ರಪತಿಗಳು ವಜಾ ಮಾಡಬೇಕು. ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಸಿ.ಟಿ.ರವಿ ಅವರ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ರಾಜ್ಯಪಾಲರು ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿಕೊಂಡು ರದ್ದು ಪಡಿಸಬೇಕೆಂದು ಆಗ್ರಹಿಸಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಸಂವಿಧಾನದಡಿ ಅಧಿಕಾರದ ಪಡೆದಿರುವವರು ಮನಬಂದಂತೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಟಿಎಪಿಸಿಎಂಎಸ್ ಸದಸ್ಯರಾದ ಕೆ.ಜೆ.ದೇವರಾಜು, ಕೆ.ಎಸ್.ದ್ಯಾಪೇಗೌಡ, ಎಂ.ಲಿಂಗರಾಜು, ಪ್ರಕಾಶ್, ಟಿ.ಸಿ.ಚೌಡಯ್ಯ, ಕುಳ್ಳಚನ್ನಂಕಯ್ಯ, ಸವಿತಾ, ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ಪ್ರಮೀಳಾ, ಬಸವರಾಜ್ ಎಚ್, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಜಿ.ಪಂ.ಮಾಜಿ ಸದಸ್ಯರಾದ ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾ ರಾಜು, ಮನ್ಮುಲ್ ಅಭ್ಯರ್ಥಿ ಡಿ.ಕೃಷ್ಣೇಗೌಡ, ಮುಖಂಡರಾದ ಸಿ.ಮಾಧು, ಕುಂದೂರು ಪ್ರಕಾಶ್, ಸಾಹಳ್ಳಿ ಶಶಿಕುಮಾರ್, ಹುಸ್ಕೂರು ಕೃಷ್ಣಮೂರ್ತಿ, ಸೌಮ್ಯ, ಸಿ.ಎಂ.ವೇದಮೂರ್ತಿ, ಬಸವರಾಜು, ಸಾಗ್ಯ ಕೆಂಪಣ್ಣ, ಶ್ರೀಕಾಂತ್, ಮಹದೇವು, ಮನು ಅರಸು, ಮಹೇಶ್, ಸುರೇಶ್, ಡಿ.ಎಂ ಸುಂದರ್, ಮುತ್ತುರಾಜ್, ಜಗದೀಶ್, ನಾಗಮಹದೇವ್, ಚಿಕ್ಕಸ್ವಾಮಿ, ವೆಂಕಟೇಶ್, ಕಿರಣ್ ಶಂಕರ್, ಎಂ.ಎನ್.ಜಯರಾಜು, ಕೃಷ್ಣ ಸೇರಿದಂತೆ ಇತರರು ಇದ್ದರು.