ಸಾರಾಂಶ
ಗದಗ: ಭಾರತ ಸ್ವಾತಂತ್ರ್ಯ ಪಡೆದ ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಪವಿತ್ರ ಸಂವಿಧಾನದಿಂದ ಭಾರತೀಯರೆಲ್ಲರೂ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಅಂಬೇಡ್ಕರಗೆ ಸದಾ ಅವಮಾನ ಮಾಡುತ್ತಿದೆ. ಈ ಹಿಂದೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿ ನಾಯಕರು ಅನೇಕ ಹೇಳಿಕೆ ನೀಡುತ್ತಿದ್ದರು. ಈಗ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ನೆನೆಯುವ ಬದಲು ದೇವರನ್ನು ನೆನೆಸಿದರೆ ಸ್ವರ್ಗ ಸಿಗುತ್ತಿತ್ತು ಎಂದು ಹೇಳುವ ಮೂಲಕ ದೇಶಕ್ಕೆ ಹಾಗೂ ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ತಮ್ಮ ಹೇಳಿಕೆಯನ್ನು ಅಮಿತ್ ಶಾ ಕಡೆಯಿಂದ ಹೇಳಿಸಿದ್ದಾರೆ. ಆದರೆ, ಈಗ ಹೇಳಿಕೆಯನ್ನು ಕಾಂಗ್ರೆಸ್ ನವರು ತಿರುಚಿದ್ದಾರೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ದುಷ್ಟ ಶಕ್ತಿಗಳು ಆಡಳಿತ ನಡೆಸುತ್ತಿದ್ದು, ಒಳ್ಳೆಯ ಕಾಲವಿಲ್ಲ. ಸಂವಿಧಾನಕ್ಕೆ ಧಕ್ಕೆ ಬರುವ ವ್ಯವಸ್ಥೆ ಬಿಜೆಪಿಯವರು ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಮಾನಗಳಲ್ಲಿ ದೇಶದ ಜನತೆ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಪ್ರಧಾನಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ವಿಪ ಸದಸ್ಯ ಸಿ.ಟಿ. ರವಿ ಅಸಂವಿಧಾನಿಕ ಪದ ಬಳಸಿದ್ದು ಸರಿಯಲ್ಲ.ಈ ಹಿಂದೆ ಬಿಜೆಪಿಯ ಹಲವಾರು ನಾಯಕರು ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿ.ಟಿ. ರವಿ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ರೀತಿ ಮಾತನಾಡುತ್ತಿದ್ದಾರೆ. ಆದರೆ, ಪೊಲೀಸರು ಈಗಾಗಲೇ ಅವರನ್ನು ವಶಕ್ಕೆ ಪಡೆದು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದ್ದು ಮುಂದಿನ ದಿನಮಾನಗಳಲ್ಲಿ ಅವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದರು.ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ.ಪಾಟೀಲ್ ಮಾತನಾಡಿ, ಲೋಕಸಭೆಯ ಅಧಿವೇಶನದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅಮಿತ್ ಶಾ ಹೇಳಿಕೆಯಿಂದ ದೇಶ ತಲೆ ತಗ್ಗಿಸುವಂತಾಗಿದೆ. ಅಂಬೇಡ್ಕರ್ ನೆನಸುವ ಬದಲು ದೇವರನ್ನು ನೆನೆಸಿದ್ದರೇ ಸ್ವರ್ಗ ಸಿಗುತ್ತದೆ ಎಂದು ಹೇಳಿರುವುದು ಖಂಡನೀಯ. ಸಂವಿಧಾನ ತಿದ್ದುಪಡಿ ಮಾಡಬೇಕು ಅಂತ ಬಿಜೆಪಿಯವರು ಹೆಳುತ್ತಾ ಬಂದಿದ್ದು, ಅದನ್ನು ಸಮರ್ಥಿಸುವ ರೀತಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ದೇಶದ ಜನ ಪೂಜಿಸುವ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ನೋವಿನ ಸಂಗತಿಯಾಗಿದೆ. ಅಮಿತ್ ಶಾ ಅವರನ್ನು ಕೂಡಲೇ ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನವರ, ಮಂಜುನಾಥ ಮುಳಗುಂದ, ಬಸವರಾಜ ಕಡೆಮನಿ, ಅಕ್ಬರಸಾಬ್ ಬಬರ್ಚಿ, ಅಶೋಕ ಮಂದಾಲಿ, ಬಿ.ಬಿ. ಅಸೂಟಿ, ಪೂಜಾ ಬೇವೂರ, ಲಲಿತಾ ಗೋಳಗೊಳಕಿ, ಲಕ್ಷ್ಮೀ ಅನಿಲಕುಮಾರ ಸಿದ್ದಮ್ಮನಹಳ್ಳಿ, ಶಿವಣ್ಣ ಬಳ್ಳಾರಿ, ಉಮರಫಾರೂಖ್ ಹುಬ್ಬಳ್ಳಿ, ಶಿವರಾಜ ಕೊರಸ, ಮೋಹನ್ ದೊಡಕುಂಡಿ, ಮೈಲಾರಪ್ಪ ಚಳ್ಳಮರದ, ಮಂಜುನಾಥ ಕೊರವರ ಸೇರಿದಂತೆ ಅನೇಕರು ಇದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ಅತ್ಯಂತ ಅಮಾನವೀಯವಾಗಿದೆ. ಮಹಿಳೆಯರ ವಿರುದ್ಧ ಅವಾಚ್ಯ ಶಬ್ದ ಬಳಸುವ ಇಂತಹ ನಾಯಕರು ರಾಜಕೀಯದಲ್ಲಿ ಇರಬಾರದು. ಕೂಡಲೇ ಬಿಜೆಪಿ ಇವರನ್ನು ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ಸುಜಾತಾ ದೊಡ್ಡಮನಿ ತಿಳಿಸಿದ್ದಾರೆ.