ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ವಿರುದ್ಧ ಉತ್ತರಾಖಂಡದಲ್ಲಿ ದಾಖಲಾಗಿರುವ ಎಫ್‌ಐಆರ್‌ ವಿರುದ್ಧ ಬುಧವಾರ ನಗರದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಬೃಹತ್ ಪ್ರತಿಭಟನೆ ನಡೆಸಿದೆ. ಅಲ್ಲದೆ. ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ವಿರುದ್ಧ ಉತ್ತರಾಖಂಡದಲ್ಲಿ ದಾಖಲಾಗಿರುವ ಎಫ್‌ಐಆರ್‌ ವಿರುದ್ಧ ಬುಧವಾರ ನಗರದಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಬೃಹತ್ ಪ್ರತಿಭಟನೆ ನಡೆಸಿದೆ. ಅಲ್ಲದೆ. ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲು ಕರೆ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರ್‍ಯಾಲಿ ನಡೆಸಿದ ಜಾಗ ಶುದ್ಧೀಕರಣ ನಡೆಸಿದ್ದ ಮನುವಾದಿಗಳ ಕ್ರಮ ಖಂಡಿಸಿದ ರಾಹುಲ್‌ ಗಾಂಧಿ ಮೇಲೆ ಎಫ್‌ಐಆರ್‌ ದಾಖಲಿಸಿರುವುದನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಉತ್ತರಾಖಂಡದಲ್ಲಿ ದಾಖಲಾದ ಎಫ್‌ಐಆರ್‌ ಕೇವಲ ರಾಹುಲ್‌ ಗಾಂಧಿ ಮೇಲೆ ಅಲ್ಲ. ಎಲ್ಲ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಹೂಡಿದ ಕೇಸ್‌ ಎಂದು ಭಾವಿಸಿ ಪ್ರತಿಭಟನೆ ನಡೆಸಬೇಕು. ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಬೇಕು ಎಂದು ತೀರ್ಮಾನಿಸಲಾಯಿತು.

ಬಿಜೆಪಿ ಕೊನೆಗಾಲ ಹತ್ತಿರ-ಸಿಎಂ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿ ಎಲ್ಲರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಅವರಿಗೆ ಕೊನೆಗಾಲ ಸಮೀಪಿಸುತ್ತಿದೆ. 2028ರಲ್ಲಿ ಕರ್ನಾಟಕದಲ್ಲಿ ಹಾಗೂ 2029ರಲ್ಲಿ ದೇಶದಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜನರೇ ನಮ್ಮ ಆಡಳಿತ, ಕಾರ್ಯಕ್ರಮ ಮೆಚ್ಚಿದ್ದಾರೆ. ಇದನ್ನು ಸಹಿಸಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ಕುತಂತ್ರಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.

‘ರಾಹುಲ್ ಗಾಂಧಿ ಹುಟ್ಟು ಹೋರಾಟಗಾರ, ಹೋರಾಟಗಾರನಾಗಿ ಬದುಕುತ್ತಿದ್ದು, ಹೋರಾಟಗಾರನಾಗಿಯೇ ಸಾಯುತ್ತಾರೆ. ಇಂಥ ನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಇಂಥ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಬೇರೆಯವರಂತೆ ರಾಹುಲ್ ಗಾಂಧಿ ಅವರು ಮುಚ್ಚಳಿಕೆ ಬರೆದುಕೊಡಲ್ಲ, ಕ್ಷಮೆಯನ್ನೂ ಕೇಳಲ್ಲ. ಈ ಕ್ರಮಕ್ಕೆ ನ್ಯಾಯಾಲಯವೇ ಬಿಜೆಪಿಗೆ ಛೀಮಾರಿ ಹಾಕಲಿದೆ ಎಂದರು.

ರಾಜ್ಯವ್ಯಾಪಿ ಪ್ರತಿಭಟಿಸಿ-ಸಿದ್ದು:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ರಾಹುಲ್ ಗಾಂಧಿ ವಿರುದ್ಧ ಕೇಸು ದಾಖಲು ಮಾಡಿರುವುದು ಘೋರ ಅಪರಾಧ. ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಆಗಬೇಕು ಎಂದು ಹೇಳಿದರು.

ಪ್ರತಿ ಜಿಲ್ಲೆಗಳಲ್ಲಿ ಹೋರಾಟ:

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುವುದು’ ಎಂದರು.

ಬಿಜೆಪಿಗರ ಈ ಕೃತ್ಯ ಹೊಸತಲ್ಲ. 1978ರಲ್ಲಿ ಜಗಜೀವನ್ ರಾಮ್ ಅವರು ದೇಶದ ಉಪಪ್ರಧಾನಿಯಾಗಿದ್ದಾಗ, ವಾರಾಣಸಿಯಲ್ಲಿ ಪ್ರತಿಮೆ ಉದ್ಘಾಟಿಸಿದಾಗ ದಲಿತರು ಮೇಲ್ಜಾತಿಯವರ ಪ್ರತಿಮೆ ಅನಾವರಣ ಮಾಡುವ ಅರ್ಹತೆ ಇಲ್ಲ ಎಂದು ಗಂಗಾಜಲ ಮೂಲಕ ಶುದ್ಧೀಕರಣ ಮಾಡಿದ್ದ ಉದಾಹರಣೆ ಇದೆ. ರಾಹುಲ್ ಗಾಂಧಿ ಅವರ ಒಬ್ಬರ ಮೇಲೆ ಎಫ್ಐಆರ್ ಆಗಿಲ್ಲ, ನಮ್ಮೆಲ್ಲರ ಮೇಲೆ ದಾಖಲಾಗಿದೆ ಎಂದರು.