ಸಾರಾಂಶ
ಸಿ.ಟಿ.ರವಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
ಬಳ್ಳಾರಿ: ಸಿ.ಟಿ. ರವಿ ಅವಾಚ್ಯ ಪದ ಬಳಕೆ ಖಂಡಿಸಿ, ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ನಗರದ ರಾಯಲ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವಾಚ್ಯ ಪದ ಬಳಿಸಿ ನಿಂದನೆ ಮಾಡಿರುವುದು ನಿಜಕ್ಕೂ ಖಂಡಿನಾರ್ಹವಾಗಿದೆ. ಸಿ.ಟಿ.ರವಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮನುಸ್ಮೃತಿಗೆ ಬೆಲೆ ನೀಡುವ ಬಿಜೆಪಿಯವರಿಗೆ ಭಾರತೀಯ ಸಂವಿಧಾನ ಮತ್ತು ಅದನ್ನು ರಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ ಅಂಬೇಡ್ಕರ್ ಅವರ ಬಗ್ಗೆ ಇರುವ ನಿಜವಾದ ಅಭಿಪ್ರಾಯವನ್ನು ಅಮಿತ್ ಶಾ ಅವರು ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಥಾನದಲ್ಲಿದ್ದುಕೊಂಡು, ಸಂವಿಧಾನದ ನಿರ್ಮಾತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಜ್ಯಸಭಾ ಕಲಾಪದಲ್ಲಿ ಕೀಳಾಗಿ ಮಾತನಾಡುವ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದಾರೆ. ಇವರ ಮೇಲೆ ಕೂಡಲೇ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಅಂಬೇಡ್ಕರ್ ಅವರು, ದಲಿತರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಡವರ ದಾರಿ ದೀಪವಾಗಿದ್ದಾರೆ. ಬಿಜೆಪಿಯವರು ಸಂವಿಧಾನಕ್ಕಿಂತ ಆರ್‌ಎಸ್‌ಎಸ್ ಮನುವಾದಕ್ಕೆ ಆದ್ಯತೆ ನೀಡಿದ್ದಾರೆ. ಅಂಬೇಡ್ಕರ್ ಅವರನ್ನು ಅವಮಾನಿಸಿದ ಶಾ, ಈ ಹಿಂದೆ ಗುಜರಾತ್ ರಾಜ್ಯದಿಂದ ಗಡಿಪಾರು ಆದವರು. ಇವರಿಗೆ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆಯೇ ಇಲ್ಲ. ಗಡಿಪಾರಾಗಿ ಬಂದಂತಹ ವ್ಯಕ್ತಿಗೆ ಕೇಂದ್ರ ಸಚಿವ ಸ್ಥಾನ ನೀಡಿರುವುದೇ ತಪ್ಪು ಎಂದು ಕಿಡಿ ಕಾರಿದರು.ಕಾಂಗ್ರೆಸ್ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಪಾಲಿಕೆ ಸದಸ್ಯರಾದ ಗಾದೆಪ್ಪ, ವಿವೇಕ್ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಕುರಿತಾದ ಹೇಳಿಕೆಯನ್ನು ಖಂಡಿಸಿ ಬಳ್ಳಾರಿಯಲ್ಲಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.