ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿ ಮತ್ತು ಡಿ ಜಮೀನನ್ನು ಮೀಸಲು ಅರಣ್ಯ ಎಂದು ಪರಿವರ್ತಿಸುವ ಆದೇಶವನ್ನು ವಿರೋಧಿಸಿ ರೈತ ಹೋರಾಟ ಸಮಿತಿ, ಜಿಲ್ಲಾ ರೈತ ಸಂಘದಿಂದ ಪಕ್ಷಾತೀತವಾಗಿ ಮಡಿಕೇರಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಜಾಥಾ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಆಗಮಿಸಿತು. ಈ ಸಂದರ್ಭ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ಎಂ.ಎಂ ವೃತ್ತದ ಮೂಲಕ ಖಾಸಗಿ ಬಸ್ ನಿಲ್ದಾಣದ ಮೂಲಕ ನಗರದ ಗಾಂಧಿ ಮೈದಾನದಲ್ಲಿ ಪ್ರತಿಭಟನಾಕಾರರು ಸಮಾವೇಶಗೊಂಡರು. ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷಣೆ ಕೂಗಿ ಅರಣ್ಯ ಹಾಗೂ ಕಂದಾಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಜಿಲ್ಲಾ ಸಂಘ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಪಕ್ಷಾತೀತವಾದ ಪ್ರತಿಭಟನೆ ನಡೆಯಿತು.ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ರೈತ ಹೋರಾಟಗಾರ ಸುಧೀರ್ ಕುಮಾರ್ ಮಾತನಾಡಿ ರೈತರು ಯಾವುದೇ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ. ಬದಲಾಗಿ ಸರ್ಕಾರವೇ ರೈತರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಹೇಳಿದರು.
ಮಲೆನಾಡಿನ 36 ವಿಧಾನಸಭಾ ಕ್ಷೇತ್ರದ ರೈತರು ಒಂದಾದರೆ ಸರ್ಕಾರ ಮಣಿಯುತ್ತದೆ. ಕೆಲವು ಎನ್ ಜಿ ಒ ಗಳಿಗೆ ಮನುಷ್ಯರಿಗಿಂತ ಪ್ರಾಣಿಗಳೇ ಮುಖ್ಯವಾಗಿದೆ ಎಂದು ವ್ಯಂಗ್ಯ ಮಾಡಿದ ಅವರು, ಅರಣ್ಯವನ್ನು ಉಳಿಸಿದ್ದು ಜನರೇ ಹೊರತು ಸರ್ಕಾರವಲ್ಲ ಎಂದರು.ಸಿ ಅಂಡ್ ಡಿ ಲ್ಯಾಂಡ್ ಮೀಸಲು ಅರಣ್ಯವಾದರೆ ಕೋವಿ ಹೊಂದಲು ಅವಕಾಶವಿಲ್ಲ. ಕೊಡಗಿನಲ್ಲಿ ಕ್ಷೇತ್ರ ಕಡಿತವಾಗಲು ಅರಣ್ಯ ಕಾನೂನೇ ಕಾರಣ ಎಂದು ಹೇಳಿದರು.
ಶಾಸಕ ಡಾ. ಮಂತರ್ ಗೌಡ ಮಾತನಾಡಿ ರೈತನ ಮಗನಾಗಿ, ಬೆಳೆಗಾರನಾಗಿ, ಶಾಸಕನಾಗಿ ಅನ್ನದಾತರ ಪರ ನಿಲ್ಲುವುದು ನನ್ನ ಆದ್ಯ ಕರ್ತವ್ಯ. ರಾಜಕೀಯಕ್ಕಿಂತ ರೈತರ ಹಿತ ಮುಖ್ಯವಾಗಿದೆ. ಅನ್ನದಾತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಬಳಿ ಆಗಲಿ ಕೇಂದ್ರ ಸರ್ಕಾರದ ಬಳಿ ತೆರಳಲು ಸದಾ ಸಿದ್ಧ. ರೈತರ ಹಿತಕಾಯಲು ಬದ್ಧನಾಗಿರುತ್ತೇನೆಂದು ರೈತರಿಗೆ ಈ ಸಂದರ್ಭದಲ್ಲಿ ಅಭಯ ನೀಡಿದರು.ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಈ ದೇಶದ ಕಾನೂನು ಅರಣ್ಯ ಇಲಾಖೆಗೆ ಅನ್ವಯವಾಗದು ಎಂದು ಕಿಡಿಕಾರಿದ ಅವರು, ಎಲ್ಲರೂ ಒಗ್ಗಟ್ಟಾದರೆ ಅರಣ್ಯಾಧಿಕಾರಿಗಳ ಹಾವಳಿ ತಡೆಯಬಹುದು. ಯಾರು ಎಷ್ಟೇ ನೋಟೀಸ್ ನೀಡಿದರೂ ಹೆದರುವ ಅವಶ್ಯವಿಲ್ಲ. ನಮ್ಮ ಭೂಮಿ ನಮ್ಮ ಹಕ್ಕು. ಇದನ್ನು ಉಳಿಸೋಣ. ಅರಣ್ಯ ಉಳಿಸಲು ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ. ಇದನ್ನು ಅರ್ಥ ಮಾಡಿಕೊಂಡು ಕೊಡಗಿನ ಜನರಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಪರಿಸರವಾದಿಗಳಿಂದಲೇ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಕೊಡಗಿನ ಜನರಿಗೆ ತೊಂದರೆ ನೀಡುವ ಮೂಲಕ ವಿದೇಶಿ ಫಂಡ್ ಅನ್ನು ದೋಚುವ ಕೆಲಸ ಮಾಡುತ್ತಿದ್ದಾರೆ. ಈಶ್ವರ್ ಖಂಡ್ರೆ ನಂ. 1 ಪರಿಸರವಾದಿ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು. ಅವರು ಬಂದ ನಂತರ ಮೂರು ಸುತ್ತೋಲೆಯನ್ನು ಹೊರಡಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸಿ ಆ್ಯಂಡ್ ಡಿ ಲ್ಯಾಂಡ್ ಸೇರಿ ಸಾಕಷ್ಟು ಸಮಸ್ಯೆಗಳಿದೆ. ಇದು ಕಂದಾಯ ಇಲಾಖೆಯ ಜಾಗ. ಆದರೆ ಇದು ಅರಣ್ಯವಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಈ ಹಿಂದೆ ನಾವು ಕಸ್ತೂರಿ ರಂಜನ್ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಿದ್ದೇವೆ. ಸಿ ಆ್ಯಂಡ್ ಡಿ ಜಾಗವನ್ನು ಅರಣ್ಯ ಎಂದು ಪರಿವರ್ತಿಸಿದರೆ ನಮ್ಮ ತೀವ್ರ ವಿರೋಧವಿದೆ ಎಂದರು.ಈ ಸಂದರ್ಭ ರೈತ ಮುಖಂಡರಾದ ಕೆ.ಎಂ. ಲೋಕೇಶ್, ಬಿ.ಜೆ. ದೀಪಕ್, ಜೆಡಿಎಸ್ ಮುಖಂಡ ಸಿ.ಎಲ್ ವಿಶ್ವ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ಜಿ. ಮೇದಪ್ಪ, ವೀಣಾ ಅಚ್ಚಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ರೈತರ ಬೇಡಿಕೆಗಳು: ಅವೈಜ್ಞಾನಿಕವಾಗಿ ಮಾಡಿರುವ ಸಿ ಆ್ಯಂಡ್ ಡಿ ಸರ್ವೆಯನ್ನು ರದ್ದುಗೊಳಿಸಿ, ಮರು ಸರ್ವೆ ಮಾಡಿ ರೈತರ ವ್ಯವಸಾಯ ಮಾಡಿರುವ ಭೂಮಿಯನ್ನು ರೈತರ ಹೆಸರಿಗೆ ಮಂಜೂರು ಮಾಡಬೇಕು.ಯಾವುದೇ ಮಾಹಿತಿ ಇಲ್ಲದೆ ಮಾಡಿರುವ ಮೀಸಲು ಅರಣ್ಯ, ಸೆಕ್ಷನ್ 4/5 ಅನ್ನು ಕೈಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸಿರು ನ್ಯಾಯಾಲಯಕ್ಕೆ ಒತ್ತಡ ಹಾಕಿ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವುದನ್ನು ತಪ್ಪಿಸಬೇಕು.
ಅರಣ್ಯ ಹಾಗೂ ಕಂದಾಯ ಇಲಾಖೆಯವರು ವಾಸ್ತವತೆ ಅರಿಯದೆ ಮಾಡಿರುವ ಡೀಮ್ಡ್ ಫಾರೆಸ್ಟ್ ಕಾಯ್ದೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕು.ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿರಸ್ಕರಿಸಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದ ಹಾಗೆ ಕೇರಳ ಮಾದರಿಯಂತೆ ಜಾರಿ ಮಾಡಬೇಕು.
ಊರುಉಡುವೆ, ದೇವರಕಾಡು, ಗೋಮಾಳ ಇವುಗಳನ್ನು ನಮ್ಮ ಪೂರ್ವಿಕರು ಊರಿನ ಹಿತದೃಷ್ಠಿಯಿಂದ ಮೀಸಲು ಮಾಡಿರುವ ಭೂಮಿಯಾಗಿದ್ದು, ಅದನ್ನು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡಿಸದೆ, ಮೊದಲಿನಂತೆ ಗ್ರಾಮದ ಅಧೀನಕ್ಕೆ ಒಳಪಡಿಸಬೇಕು.ಈ ಅವೈಜ್ಞಾನಿಕ ಅರಣ್ಯ ಕಾಯ್ದೆಯಿಂದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ 50, 53, 57 ಅರ್ಜಿಗಳಿಗೆ ಅನುಗುಣವಾಗಿ ರೈತರಿಗೆ ಯಾವುದೇ ಅಡೆತಡೆಗಳಿಲ್ಲದೆ ಹಕ್ಕು ಪತ್ರ ವಿತರಿಸಬೇಕು.
ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ದುರಸ್ಥಿ ಕಡತಗಳನ್ನು ಆದಷ್ಟು ಬೇಗ ದುರಸ್ಥಿ ಮಾಡಿಕೊಡಬೇಕು.ಬಡವರು ಕಟ್ಟಿರುವ ಮನೆಗಳಿಗೆ 94ಸಿ ಅನ್ನು ಮೊದಲಿನಂತೆ ದಾಖಲಾತಿ ವಿತರಿಸಬೇಕು.
ರೈತರಿಗೆ 10 ಹೆಚ್. ಪಿ. ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ನೀಡಬೇಕು.ಮಾನವ ಹಾಗೂ ವನ್ಯಜೀವಿಗಳ ಸಂಘರ್ಷದಲ್ಲಿ ನಮ್ಮ ಬದುಕುವ ಹಕ್ಕನ್ನು ಅರಣ್ಯ ಇಲಾಖೆಯ ಮೂಲಕ ಕಸಿದುಕೊಳ್ಳಬಾರದು.
ಸಿ ಮತ್ತು ಡಿ ಜಾಗದ ಸಮಸ್ಯೆ ಬಗ್ಗೆ ಜ.3ರಂದು ಸಭೆ ನಡೆಸಲು ಮುಖ್ಯಮಂತ್ರಿಗಳು ಜಂಟಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಕಂದಾಯ, ಅರಣ್ಯ ಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದು, ಮಲೆನಾಡು ಭಾಗದ 36 ಶಾಸಕರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗುವ ಭರವಸೆಯಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.ಎಲ್ಲರೂ ಒಗ್ಗಟ್ಟಾದರೆ ಅರಣ್ಯಾಧಿಕಾರಿಗಳ ಹಾವಳಿ ತಡೆಯಬಹುದು. ಯಾರು ಎಷ್ಟೇ ನೋಟೀಸ್ ನೀಡಿದರೂ ಹೆದರುವ ಅವಶ್ಯವಿಲ್ಲ. ನಮ್ಮ ಭೂಮಿ ನಮ್ಮ ಹಕ್ಕು. ನಮ್ಮ ಜಮೀನು ಹಾಗೂ ನಮ್ಮ ಅರಣ್ಯವನ್ನು ಉಳಿಸಲು ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಮಾಜಿ ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.
ಸಿ ಮತ್ತು ಡಿ ಜಾಗ ಅರಣ್ಯ ಇಲಾಖೆಯದಲ್ಲ. ಇದು ಕಂದಾಯ ಇಲಾಖೆಯ ಜಾಗ. ಆದರೆ ಇದು ಮೀಸಲು ಅರಣ್ಯ ಎಂದು ಅರಣ್ಯ ಸಚಿವರು ಏಕೆ ಆದೇಶ ಮಾಡುತ್ತಾರೆ. ಆದ್ದರಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.